ಪೌರನೌಕರರ ಸಂಘದಿಂದ ಮುದುವರಿದ ಮುಷ್ಕರ

28rajesh1
Published on

ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರನೌಕರರ ಸಂಘದ ವತಿಯಿಂದ ನಡೆಯುತ್ತಿರುವ ಮುಷ್ಕರ ಬುಧವಾರವೂ ಮುಂದುವರಿದಿದ್ದು, ಹಲವಾರು ನಗರಸಭೆ ಸದಸ್ಯರು ಪೌರನೌಕರರ ಹೋರಾಟಕ್ಕೆ ಬೆಂಬಲ ನೀಡಿದರು.

ನಗರದ ನಗರಸಭೆ ಕಚೇರಿಯ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮುಂದುವರಿಸಿದರು. ವಿವಿಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೌರನೌಕರರ ಹೋರಾಟಕ್ಕೆ ಹಲವಾರು ನಗರಸಭಾ ಸದಸ್ಯರು ಬೆಂಬಲನೀಡಿದರು. ಸರ್ಕಾರ ಪೌರನೌಕರರು ಹಾಗೂ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮವಹಿಸುವಂತೆ ಒತ್ತಾಯಿಸಿದರು.

ಈ ವೇಳೆ ನಗರಸಭೆ ಮಾಜಿ ಸದಸ್ಯ ಮಹದೇವಯ್ಯ ಮಾತನಾಡಿ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ನಿತ್ಯವೂ ಸ್ವಚ್ಛತೆಯಲ್ಲಿ ಭಾಗಿಯಾಗದಿದ್ದರೇ ಸಾರ್ವಜನಿಕರು ಜೀವನ ನಡೆಸುವುದೇ ದುಸ್ತರವಾಗುತ್ತದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಪೌರನೌಕರರ ಪಾತ್ರ ಅಪಾರವಾಗಿದೆ. ಪೌರನೌಕರರು ಹಾಗೂ ಪೌರಕಾಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ್ದಾರೆ. ಆದರೂ ಸರ್ಕಾರ ಇವರಿಗೆ ಸ್ಪಂದನೆ ಮಾಡದಿರುವುದು ಅತ್ಯಂತ ದುರದೃಷ್ಟಕರ ಎಂದರು.

ನಗರ ಮತ್ತು ಪಟ್ಟಣ ಪ್ರದೇಶದ ಜನರ ಆರೋಗ್ಯವನ್ನು ಕಪಾಡುವಲ್ಲಿ ಪೌರಕಾರ್ಮಿಕರು ಪ್ರಮುಖ ಪಾತ್ರವಹಿಸಿದ್ದಾರೆ. ಈಗಾಗಲೇ 2 ದಿನ ಸ್ವಚ್ಛತೆ ಕಾರ್ಯದಲ್ಲಿ ಕಾರ್ಮಿಕರು ಭಾಗಿಯಾಗದೇ ಸಮಸ್ಯೆ ಉಂಟಾಗಿದೆ. ಪ್ರತಿನಿತ್ಯವೂ ಇಂತಹ ಕಸದ ನಡುವೆಯೇ ಕರ್ತವ್ಯ ನಿರ್ವಹಿಸುವ ಅವರಿಗೆ ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯವನ್ನು ವಿಸ್ತರಿಸಬೇಕಾಗಿದೆ. ಇದು ಅವರಿಗೆ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯೆಪ್ರವೇಶಿಸಿ ಆದಷ್ಟು ಬೇಗ ಇವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಕಲೀಲ್ ಉಲ್ಲಾ, ಎಂ.ಮಹೇಶ್, ನಗರಸಭೆ ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ, ಕಿರಿಯ ಅಭಿಯಂತರ ಶಿವಶಂಕರ್ ಆರಾಧ್ಯ, ಪರಿಸರ ಅಭಿಯಂತರ ರೂಪ, ಹಿರಿಯ ಆರೋಗ್ಯ ನಿರೀಕ್ಷ ಮಂಜುನಾಥ್, ಸುಷ್ಮಾ, ಕಿರಿಯ ಆರೋಗ್ಯ ನಿರೀಕ್ಷಕಿ ಪುಷ್ಪ, ಪೌರಕಾರ್ಮಿಕರಾದ ಆರ್.ನಾಗರಾಜು, ಸಿ.ಪಿ.ಕುಮಾರ್, ಎಸ್.ರಾಜೇಂದ್ರ, ಸ್ವಾಮಿನಾಥ್, ತುಳಸಮ್ಮ, ರಾಜಮ್ಮ, ಆರ್.ಪಾಪತಿ, ವಿಜಯಮ್ಮ, ಭಾಗ್ಯ, ವರಲಕ್ಷ್ಮೀ ಹಾಗೂ ಇತರರು ಭಾಗವಹಿಸಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ತಮ್ಮ ಕರ್ತವ್ಯವನ್ನು ಮಾಡದಿದ್ದರೇ, ಸಾರ್ವಜನಿಕರು ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರ ಅವರ ಪ್ರಮುಖ ಬೇಡಿಕೆ ನಗರದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಯೋಜನೆಯಾದ ಜ್ಯೋತಿ ಸಂಜೀವಿನಿಯನ್ನು ಪೌರನೌಕರರಿಗೂ ವಿಸ್ತರಣೆ ಮಾಡಬೇಕು.

-ಮಹದೇವಯ್ಯ, ಮಾಜಿ ಸದಸ್ಯ, ನಗರಸಭೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net