

ಶಿಕಾರಿಪುರ: ಪೌರ ಕಾರ್ಮಿಕರ ಸೇವೆಯ ಕಾರಣದಿಂದ ನಾವು ದಿನನಿತ್ಯ ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನು ನಾವು ಕಾಣಬಹುದು. ಪೌರಕಾರ್ಮಿಕರ ಸೇವೆ ಅನನ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪುರಸಭೆಯಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಸಮಾಜ ಪೌರಕಾರ್ಮಿಕರನ್ನು ಅತ್ಯಂತ ಗೌರವದಿಂದ ಕಾಣಬೇಕು. ಪೌರ ಕಾರ್ಮಿಕರೆಂದರೆ ಸ್ವಚ್ಛತೆಯ ಯೋಧರು. ಅವರು ಒಂದು ದಿನ ತಮ್ಮ ಕೆಲಸಕ್ಕೆ ರಜೆ ಹಾಕಿದರೆ ಇಡೀ ಪಟ್ಟಣದ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಆಗ ನಮಗೆ ಅವರ ಶ್ರಮದ ಅರಿವಾಗುತ್ತದೆ ಎಂದರು. ಪೌರಕಾರ್ಮಿಕರ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಗೌರವಯುತವಾದ ಸ್ಥಾನಕ್ಕೆ ಬರಬೇಕು. ಬೇರೆ ಬೇರೆ ಕಡೆಗಳಲ್ಲಿ ಪೌರಕಾರ್ಮಿಕರ ಮಕ್ಕಳು ಪರಿಶ್ರಮದಿಂದ ಓದಿ ಉನ್ನತ ಸ್ಥಾನಕ್ಕೇರಿರುವುದನ್ನು ನಾವು ಪತ್ರಿಕೆಯಲ್ಲಿ ಓದಿದ್ದೇವೆ. ಇಂದು ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಹಬ್ಬದ ವಾತಾವರಣ ಮೂಡಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು. ಶಿಕಾರಿಪುರ ಪುರಸಭೆ ನನಗೂ ಹಾಗೂ ನಮ್ಮ ತಂದೆಗೂ ಮೊದಲು ಆಶೀರ್ವಾದ ಮಾಡಿ ಉನ್ನತ ಸ್ಥಾನಕ್ಕೇರಿಸಿದ ಪುಣ್ಯಸ್ಥಳ. ಶಿಕಾರಿಪುರ ಪುರಸಭೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಪೌರಕಾರ್ಮಿಕರ ಸುಕ್ಷೇಮ ಮತ್ತು ಕುಟುಂಬದ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಅನುಕೂಲವನ್ನು ನೀವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಪೌರಕಾರ್ಮಿಕರು ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಿದರು. ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಮುಖ್ಯಾಕಾರಿ ಭರತ್, ಸುರೇಶ್ ಇತರರಿದ್ದರು.