

ವಿಜಯವಾಣಿ ಸುದ್ದಿಜಾಲ ಗದಗ
ಪೌರ ಕಾರ್ಮಿಕರು ನಗರದ ಸ್ವಚ್ಛತೆ ಜತೆಗೆ ವೈಯಕ್ತಿಕ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ಸಾಗಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ಶುಕ್ರವಾರ ನಗರಸಭೆ ಆವರಣದಲ್ಲಿ ಜಿಲ್ಲಾ ಪೌರ ಕಾರ್ಮಿಕರ ಮಹಾ ಸಂಘ ಹಾಗೂ ರಾಜ್ಯ ಪೌರ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಬೇಕು. ಅವಳಿ ನಗರದ ಸ್ವಚ್ಛತೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಅವಳಿ ನಗರದ ಸ್ವಚ್ಛತೆಗೆ ಜನಪ್ರತಿನಿಧಿಗಳ ಸಲಹೆ, ಸಹಕಾರದ ಜೊತೆಗೆ ಪೌರ ಕಾರ್ಮಿಕರ ಅಚ್ಚುಕಟ್ಟಾದ ಕೆಲಸವೂ ಅಗತ್ಯವಾಗಿದೆ ಎಂದರು.
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಮಾತನಾಡಿ, ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ನಗರ ಪ್ರದೇಶಗಳ ಸ್ವಾಸ್ಥ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ದೊಡ್ಡದು. ಅವಳಿ ನಗರದ ಸ್ವಚ್ಚತೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸುವ ಪೌರ ಕಾರ್ಮಿಕರು ತಾವು ಮಾಡುವ ಕೆಲಸದ ಬಗ್ಗೆ ಕೀಳರಿಮೆ ಪಟ್ಟುಕೊಳ್ಳದೇ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಅವಳಿ ನಗರದ ಸ್ವಚ್ಛತೆಗೆ ಕಾರಣೀಭೂತರಾಗಿದ್ದಾರೆ. ಇಂತಹ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ನಾವೆಲ್ಲರೂ ಪೂಜ್ಯ ಭಾವದಿಂದ, ಗೌರವದಿಂದ ಕಾಣಬೇಕು ಎಂದರು.
ಪೌರ ಕಾರ್ಮಿಕರೆಲ್ಲರೂ ತಮ್ಮ ದೈನಂದಿನ ಕೆಲಸದ ವೇಳೆ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಸರ್ಕಾರ ಪೌರ ಕಾರ್ಮಿಕರನ್ನು, ಅವರ ಮಕ್ಕಳನ್ನು ಸಮಾಜದ ಮುಂಚೂಣಿಗೆ ತರಬೇಕೆಂಬ ದಿಶೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬ ಪೌರ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಷಾ ದಾಸರ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಪೌರ ಕಾರ್ಮಿಕರು ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರದೇ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಹೈಸ್ಕೂಲ್ ಸಮಿತಿ ಅಧ್ಯಕ್ಷರ ಮಹಾಂತೇಶ ನಲವಡಿ, ಸದಸ್ಯರಾದ ಮುತ್ತಣ್ಣ ಮುಶಿಗೇರಿ, ಅನಿಲ್ ಅಬ್ಬಿಗೇರಿ, ನಾಗರಾಜ್ ತಳವಾರ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ಎಲ್.ಡಿ.ಚಂದಾವರಿ, ಕೃಷ್ಣಾ ಪರಾಪೂರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ, ನಗರಸಭೆ ಪೌರಾಯುಕ್ತ ರಮೇಶ್ ಸುಣಗಾರ, ಮುಖಂಡರಾದ ಎಸ್.ಎನ್.ಬಳ್ಳಾರಿ, ಹೇಮೇಶ್ ಯಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.