

ಬೆಳಗಾವಿ: ವಸತಿಗೃಹಗಳಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರು ಬೇರೆ ಯೋಜನೆಗಳಲ್ಲಿ ಪಡೆದುಕೊಂಡಿರುವ ನಿವೇಶನವನ್ನು ಬಿಟ್ಟುಕೊಟ್ಟರೆ, ನಿಯಮಾವಳಿಯಂತೆ ಅವರಿಗೆ ವಸತಿಗೃಹದ ಹಕ್ಕು ಪತ್ರವನ್ನು ನೀಡಲಾಗುವುದು. ಸಮೀಕ್ಷೆ ಪ್ರಕಾರ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಇಲ್ಲದಿರುವುದರಿಂದ ಗುರುತಿನ ಚೀಟಿ ನೀಡಲು ಅವಕಾಶವಿಲ್ಲ ಎಂದು ಡಿಸಿ ನಿತೇಶ್ ಪಾಟೀಲ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಿದ ಪೌರಕರ್ಮಿಕರನ್ನು ಖಾಯಂಗೊಳಿಸಿ, ಜಿಲ್ಲಾಡಳಿತದಿಂದ ಆದೇಶ ಪತ್ರಗಳನ್ನು ನೀಡಿದೆ. ಪ್ರತಿ 3 ತಿಂಗಳಿಗೊಮ್ಮೆ ಸಂಬಂಧಿತ ಇಲಾಖೆಯಿಂದ ಸಭೆ ಕರೆದು ಚರ್ಚಿಸಲಾಗುವುದು. ನಗರಾಭಿವೃದ್ದಿ ಕೋಶದಿಂದ 12 ಹಕ್ಕು ಪತ್ರ ನೀಡಿ, ವಾಪಸ್ ಪಡೆಯಲಾಗಿದೆ. ಮರಳಿ ಹಕ್ಕು ಪತ್ರ ವಿತರಣೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಸಮಿತಿ ಸಭೆಯಲ್ಲಿ ನಿರ್ಧರಿಸಿ, ಹಕ್ಕು ಪತ್ರ ವಿತರಣೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿ.ಪಂ. ಸಿಇಒ ಹರ್ಷಲ್ ಭೋಯರ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಲಕ್ಷ್ಮಣ ಬಬಲಿ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.