ಪೌರಕಾರ್ಮಿಕರಿಗೆ ಕಳಪೆ ಆಹಾರ ವಿತರಣೆ

3
Published on

ಚಿತ್ರದುರ್ಗ: ನಗರ ಸೌಂದರ್ಯ ನಿತ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಅತ್ಯಂತ ಕಳಪೆ ಆಹಾರ ವಿತರಿಸಲಾಗುತ್ತಿದ್ದು, ಪೌರಾಯುಕ್ತರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.


ಪೌರಕಾರ್ಮಿಕರು ತಮ್ಮ ಆರೋಗ್ಯ ಮುಡಿಪಾಗಿಟ್ಟು ನಗರದ ಜನರ ಆರೋಗ್ಯ ರಕ್ಷಿಸುವಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಇವರಿಲ್ಲದೆ, ಯಾವುದೇ ನಗರ, ಪಟ್ಟಣ, ಗ್ರಾಮಗಳು ಸ್ವಚ್ಛವಾಗುವುದಿಲ್ಲ. ಹೀಗಾಗಿ ಸತ್ತ ಹುಳುಗಳಿರುವ ತಿಂಡಿ ನೀಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.


ಯಾರೇ ಗುತ್ತಿಗೆ ಪಡೆದರು ಮಾಸಿಕ ಬಿಲ್ ನೀಡಿ ಹಣ ಪಡೆಯುತ್ತಾರೆ. ನೀಡುವ ತಿಂಡಿಯಲ್ಲಿ ಗುಣಮಟ್ಟ ಇದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಿ ಕೊಡಬೇಕಾದ್ದು, ನಗರಸಭೆ ಅಧಿಕಾರಿಗಳ ಕರ್ತವ್ಯ. ಆದರೆ, ನಿರ್ಲಕ್ಷ್ಯ ತೋರಿರುವುದನ್ನು ನೋಡಿದರೆ, ಇದರಲ್ಲೂ ಅವ್ಯವಹಾರ ನಡೆದಿದೆಯೇ ಎಂಬ ಅನುಮಾನ ಕಾಡುತ್ತಿದ್ದು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.


ಆ. 21ರಂದು ತಿಂಡಿ ಸೇವಿಸಿದ ಎಲ್ಲ ಪೌರಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಕೋವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಹೀಗಾಗಿ ಎಲ್ಲ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು. ನಿವೇಶನ ನೀಡುವ ಮೂಲಕ ಸರ್ಕಾರ ಇವರ ನೆರವಿಗೆ ಧಾವಿಸಬೇಕು ಎಂದು ಕೋರಿದರು.


ಸೇನೆಯ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ನಾಗರತ್ನಮ್ಮ, ಜಗದೀಶ್, ಮಹಮ್ಮದ್ ರಫೀ, ನಾಗರಾಜ್, ಮುತ್ತು, ಅಖಿಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net