

ಚಿಂತಾಮಣಿ: ಸುರಕ್ಷತಾ ಪರಿಕರ ಬಳಸದೆ ಪೌರಕಾರ್ಮಿಕರು ಒಳಚರಂಡಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ನಗರದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಸಮವಸ್ತ್ರ, ಮಾಸ್ಕ್, ಕೈಗವಸು, ಕಾಲಿಗೆ ಶೂ ನೀಡಬೇಕು, ಆದರೆ ಚಿಂತಾಮಣಿಯಲ್ಲಿ ಇದ್ಯಾವ ಸುರಕ್ಷತಾ ಪರಿಕರಗಳನ್ನು ಧರಿಸದೆ ಒಳಚರಂಡಿ ತ್ಯಾಜ್ಯವನ್ನು ಕಾರ್ಮಿಕರು ಟ್ರ್ಯಾಕ್ಟರ್‌ಗೆ ತುಂಬುತ್ತಿದ್ದಾರೆ.
ನಗರದ ಜನನಿಬಿಡ ಎಂ.ಜಿ.ರಸ್ತೆಯ ಚೇಳೂರು ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಹೊರತೆಗೆದಿದ್ದ ತ್ಯಾಜ್ಯವನ್ನು ಗುತ್ತಿಗೆ ಪೌರಕಾರ್ಮಿಕರು ಸಮವಸ್ತ್ರ, ಮಾಸ್ಕ್, ಕೈಗವಸು, ಕಾಲಿಗೆ ಶೂ ಧರಿಸದೆ ಟ್ಯ್ರಾಕ್ಟರ್‌ಗೆ ತುಂಬುತ್ತಿರುವ ವಿಡಿಯೋ ವೈರಲ್ ಆಗಿದ್ದು, ನಗರಸಭೆ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ತ್ಯಾಜ್ಯ ವಿಲೇವಾರಿ ಮಾಡುವಾಗ ಪೌರಕಾರ್ಮಿಕರು ಕಡ್ಡಾಯವಾಗಿ ಸುರಕ್ಷಾ ಕವಚ ಧರಿಸಬೇಕು. ಅದರಲ್ಲಿ ಒಳಚರಂಡಿ ಶುಚಿತ್ವ ಮಾಡುವಾಗ ಕಡ್ಡಾಯವಾಗಿ ಇವುಗಳನ್ನು ಧರಿಸಲೇಬೇಕು, ಆದರೆ ಬಹುತೇಕ ಎಲ್ಲ ಕಾರ್ಮಿಕರು ಚಪ್ಪಲಿ ಹಾಕಿಕೊಂಡು ಬರಿಗೈಯಲ್ಲಿ ಕಸ ಮತ್ತು ಒಳಚರಂಡಿ ಕಸ ತೆಗೆಯುತ್ತಿದ್ದಾರೆ. ಎಂ.ಆರ್. ಲೋಕೇಶ್ ಕರವೇ ಜಿಲ್ಲಾಧ್ಯಕ್ಷ
ತ್ಯಾಜ್ಯ ವಿಲೇವಾರಿ ಮಾಡುವಾಗ ಪೌರಕಾರ್ಮಿಕರು ಸುರಕ್ಷಾ ಪರಿಕರ ಧರಿಸದೆ ಬಹುತೇಕ ಎಲ್ಲ ಕಾರ್ಮಿಕರು ಚಪ್ಪಲಿ ಬಿಟ್ಟರೆ ಬರಿಗೈಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದನ್ನು ದಲಿತ ಮುಖಂಡ ನರಸಿಂಹಪ್ಪ ಎಂಬುವರು ಪೋಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ನಗರಸಭೆ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೇಳೂರು ವೃತ್ತದಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಹೊರ ಹಾಕಿದ್ದ ತ್ಯಾಜ್ಯವನ್ನು ಪೌರಕಾರ್ಮಿಕರು ಟ್ರ್ಯಾಕ್ಟರ್‌ಗೆ ತುಂಬಿಸಿಕೊಂಡು ಹೋಗಿದ್ದಾರೆ, ಎಲ್ಲ ರೀತಿಯ ತ್ಯಾಜ್ಯವನ್ನು ಸುರಕ್ಷಾ ಕವಚ ಹಾಕಿಕೊಂಡು ವಿಲೇವಾರಿ ಮಾಡುವಂತೆ ಸೂಚಿಸಿದ್ದೇನೆ. ಉಮಾಶಂಕರ್, ಪರಿಸರ ಅಭಿಯಂತರ ನಗರಸಭೆ