

ಮೊಳಕಾಲ್ಮೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಪಪಂ ಮುಖ್ಯಾಧಿಕಾರಿ ಇ.ಲೀಲಾವತಿ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಚ್ಛತೆ ಇದ್ದಲ್ಲಿ ರೋಗ ರಹಿತ ಜೀವನ ಲಭಿಸಲಿದೆ ಎಂದರು.
ಚಳಿ, ಮಳೆ, ಗಾಳಿ, ಬಿಸಿಲು, ಕೊಳಚೆ, ದುರ್ವಾಸನೆ ಸಹಿಸಿಕೊಂಡು ನಿತ್ಯ ಊರ ಕೊಳಕು ತೊಳೆದು ನಮ್ಮೆಲ್ಲರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರ ಸೇವೆ ದೊಡ್ಡದು. ಅವರು ಕಣ್ಣಿಗೆ ಕಾಣುವ ನಿಜ ದೇವರು. ಅವರು ಪಡುವ ಶ್ರಮಕ್ಕಾದರೂ ನಾವುಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ರಸ್ತೆ, ಚರಂಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು. ಗುಟ್ಖಾ, ಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಬದ್ಧತೆ ಮೆರೆಯಬೇಕು ಎಂದರು.
ಪಪಂ ಸದಸ್ಯ ಎಸ್.ಖಾದರ್ ಮಾತನಾಡಿ, ಊರಿನ ಸೌಂದರ್ಯಕ್ಕೆ ಇಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಮೂಡಿಸಿದರೂ ಎಲ್ಲೆಂದಲ್ಲೆ ಕಸ ಬಿಸಾಡುವುದು ಬೇಸರ ತರಿಸಿದೆ. ಜನರು ತಮ್ಮ ಮನೆ, ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿಯೂ ನಿರ್ಲಕ್ಷೃ ವಹಿಸುವುದು ಸರಿಯಲ್ಲ ಎಂದು ಹೇಳಿದರು.
ಆರೋಗ್ಯ ಸಹಾಯಕ ಶ್ರೀನಿವಾಸ್, ಕಂದಾಯ ಅಧಿಕಾರಿ ದೇವೇಂದ್ರಪ್ಪ, ಸದಸ್ಯ ಎಸ್.ಖಾದರ್, ಶಿವಲಿಂಗ, ಓಬಣ್ಣ, ಗೋಪಾಲ್, ಲತೀಫ್ ಮಾಸ್ತರ್, ಪೆನ್ನೋಬಳಸ್ವಾಮಿ, ಕೃಷ್ಣ, ಪವನ್‌ಕುಮಾರ, ಚಂದ್ರಣ್ಣ ಇತರರಿದ್ದರು.