ಪೌರಕಾರ್ಮಿಕರ ಶ್ರಮಕ್ಕೆ ಸಲಾಂ…

Swacchatha
Published on

ಚಿತ್ರದುರ್ಗ: ವಿಶ್ವ ಹಿಂದು ಪರಿಷದ್, ಬಜರಂಗದಳ ಹಾಗೂ ಹಿಂದು ಮಹಾಗಣಪತಿ ಉತ್ಸವ ಸಮಿತಿಯಿಂದ ಭಾನುವಾರ ನಡೆದ ಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆ ಅಂಗವಾಗಿ ಬಿ.ಡಿ.ರಸ್ತೆಯ ಮಾರ್ಗದುದ್ದಕ್ಕೂ ಬಿದ್ದಿದ್ದ ಅಂದಾಜು 40 ಟನ್ ಕಸವನ್ನು ಸೋಮವಾರ ಅನೇಕ ಪೌರಕಾರ್ಮಿಕರು ಸಂಗ್ರಹಿಸಿ, ಕೋಟೆನಗರಿಯನ್ನು ಸ್ವಚ್ಛಗೊಳಿಸಿದರು.

ಮೆರವಣಿಗೆ ಸಾಗಿದ 4.5 ಕಿ.ಮೀ. ಪೈಕಿ 3 ಕಿಲೋಮೀಟರ್‌ವರೆಗೂ ಅಲ್ಲಲ್ಲಿ ತ್ಯಾಜ್ಯದ ರಾಶಿ ಬಿದ್ದಿತ್ತು. ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದ ಮಾರ್ಗದುದ್ದಕ್ಕೂ ಕಸ ಕಣ್ಣಿಗೆ ರಾಚುತ್ತಿತ್ತು. ಸೋಮವಾರ ಸಂತೆಗೆ ಜನಸಂದಣಿ, ವಾಹನ ಸಂಚಾರ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಬೆಳಗ್ಗೆ 5.30ಕ್ಕೆ ರಸ್ತೆಗಿಳಿದ ಪೌರಕಾರ್ಮಿಕರು ವೇಗವಾಗಿ ಸ್ವಚ್ಛತಾ ಕಾರ್ಯ ನಡೆಸಿದರು. ಆದರೂ ಮಧ್ಯಾಹ್ನ 12ರವರೆಗೂ ಮುಂದುವರೆಯಿತು.

ಜೈನಧಾಮ, ಬಾಲಕರ ಸರ್ಕಾರಿ ಪಪೂ ಕಾಲೇಜು, ಮದಕರಿನಾಯಕ, ಅಂಬೇಡ್ಕರ್, ಗಾಂಧಿ, ಸಂಗೊಳ್ಳಿರಾಯಣ್ಣ, ಕನಕ ವೃತ್ತ, ಹೊಳಲ್ಕೆರೆ ರಸ್ತೆ ಹೀಗೆ ಎಂಟತ್ತು ಭಾಗಗಳಾಗಿ ತಂಡಗಳನ್ನು ವಿಂಗಡಿಸಲಾಗಿತ್ತು.

ಒಂದೊಂದು ತಂಡದಲ್ಲಿ 8, 10, 15 ಮಂದಿಯಂತೆ 100 ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. ಮಹಿಳೆಯರು ಕಸ ಗುಡಿಸಿ ಒಂದೆಡೆ ಶೇಖರಿಸುತ್ತಿದ್ದರೆ, ಪುರುಷರು 25 ಕೆ.ಜಿ, 50 ಕೆ.ಜಿ ಚೀಲಗಳಲ್ಲಿ ತುಂಬಿ ಟಿಪ್ಪರ್, ಟ್ರ್ಯಾಕ್ಟರ್, ಟಾಟಾ ಏಸ್ ವಾಹನಗಳಲ್ಲಿ ಏರಿಸುತ್ತಿದ್ದ ದೃಶ್ಯ ಕಂಡು ಬಂತು.

ಪ್ರತಿ ವಾಹನದಲ್ಲೂ ಒಮ್ಮೆಗೆ 2 ಟನ್‌ನಂತೆ ರಸ್ತೆಗೆ ಇಳಿದಿದ್ದ 10 ವಾಹನಗಳು ತಲಾ ಎರಡು ಬಾರಿ ಕಸ ಸಂಗ್ರಹಿಸಿದವು. ಬೆಳಗ್ಗೆ 10ರ ವೇಳೆಗೆ 40 ಟನ್ ಕಸ ಸಂಗ್ರಹಿಸಲಾಯಿತು.

ಪರಿಸರ ಕಾಳಜಿ ಮೆರೆದರು: ವಿವಿಧ ಸಮಾಜ, ಸಂಘ-ಸಂಸ್ಥೆಗಳು, ವರ್ತಕರು, ದಾನಿಗಳು ಮಾರ್ಗ ಮಧ್ಯೆ ಪ್ರಸಾದ, ತಂಪು ಪಾನೀಯ ವಿತರಿಸಲು ಈ ಬಾರಿಯೂ ಹೆಚ್ಚಾಗಿ ಅಡಿಕೆ ತಟ್ಟೆ, ಪೇಪರ್ ಪ್ಲೇಟ್ ಮತ್ತು ಕಪ್‌ಗಳನ್ನು ಬಳಸಿದ್ದು, ಪರಿಸರ ಕಾಳಜಿಗೆ ಸಾಕ್ಷಿಯಾಗಿತ್ತು. ಈ ಪೈಕಿ 35 ಟನ್ ಕಸ ಸಂಗ್ರಹವಾಯಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಬಿದ್ದಿದ್ದ 4 ಟನ್ ಚಪ್ಪಲಿಗಳನ್ನು ಪ್ರತ್ಯೇಕಿಸಲಾಯಿತು.

ಒಂದು ಟನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ನೀರಿನ ಬಾಟಲಿಗಳು ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದವು. ಆದರೆ, ಭಾನುವಾರ ರಾತ್ರಿಯೇ ಚಿಂದಿ ಆಯುವವರು ಸಂಗ್ರಹಿಸಲು ಮುಂದಾದ ಪರಿಣಾಮ ಪೌರಕಾರ್ಮಿಕರಿಗೆ ಈ ಬಾರಿಯೂ ಒಂದೂ ಪ್ಲಾಸ್ಟಿಕ್ ಬಾಟಲಿ ಸಿಗಿಲಿಲ್ಲ.

ಕೇವಲ 6 ಗಂಟೆಯೊಳಗೆ ಪೌರಕಾರ್ಮಿಕರು ನಗರ ಸ್ವಚ್ಛಗೊಳಿಸಿದ್ದರಿಂದ ವಾಯುವಿಹಾರ, ಹಣ್ಣು, ತರಕಾರಿ, ಸೊಪ್ಪು ಖರೀದಿಗೆ ಬಂದಿದ್ದ ಅನೇಕ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ಕೆಲವರು ವಾಹನ ನಿಲ್ಲಿಸಿ, ಪೌರಕಾರ್ಮಿಕರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡು ಬಂದಿತು.

ನಗರಸಭೆ ಪೌರಾಯುಕ್ತೆ ರೇಣುಕಾ, ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕರಾದ ಸರಳಾ, ಭಾರತಿ, ನಿರ್ಮಲಾ, ನಾಗರಾಜ್, ಬಾಬುರೆಡ್ಡಿ, ಬಸವರಾಜ್, ನೈರ್ಮಲ್ಯ ಸೂಪರ್ ವೈಸರ್ಸ್‌, ವಾಹನ ಚಾಲಕರು, ನಗರಸಭೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net