

ಬೆಂಗಳೂರು ಗ್ರಾಮಾಂತರ: ಹೊರ ಗುತ್ತಿಗೆ ಪೌರಕಾರ್ಮಿಕರನ್ನು ತಿಂಗಳೊಳಗೆ ಕಾಯಂಗೊಳಿಸದಿದ್ದರೆ ಸ್ವಚ್ಛತಾ ಸೇವೆ ಸ್ಥಗಿತಗೊಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿ ಜಿಲ್ಲಾ ಸಂಚಾಲಕ ಮ್ಯಾಥ್ಯೂ ಮುನಿಯಪ್ಪ ಎಚ್ಚರಿಕೆ ನೀಡಿದರು.
ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂ ಗೊಳಿಸಬೇಕು ಎಂದು ಒತ್ತಾಯಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದರು.
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುವ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಪೌರಕಾರ್ಮಿಕರ ಮಹಾ ಸಂಘ ಹಾಗೂ ವಿವಿಧ ಸಫಾಯಿ ಕರ್ಮಚಾರಿ ಸಂಘಟನೆಗಳ ನಿರಂತರ ಹೋರಾಟದ ಪರಿಣಾಮ ಪೌರಕಾರ್ಮಿಕರನ್ನು ಕಾಯಂಗೊಳಿಸಲು 2017-18 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ಪದ್ಧತಿ ರದ್ದುಪಡಿಸಿ ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಕಾಯಂಗೊಳಿಸಲು ನಿರ್ಣಯ ಮಾಡಿತ್ತು ಎಂದು ಹೇಳಿದರು.
ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿದ ಇಲಾಖೆ ಅಧಿಕಾರಿಗಳು ಹೊರ ಗುತ್ತಿಗೆ ಮಾಫಿಯಾಗಳೊಂದಿಗೆ ಶಾಮೀಲಾಗಿ ಅಂದಿನ ಸಚಿವ ಸಂಪುಟದ ತೀರ್ಮಾನವನ್ನು ಅನುಷ್ಠಾನ ಮಾಡದೆ ಕಾರ್ಮಿಕರ ಬದುಕನ್ನು ನಾಶ ಮಾಡಿದ್ದಾರೆ. ನಾಲ್ಕು ವರ್ಷ ಕಳೆದರೂ ನಿರ್ಣಯ ಕಾರ್ಯಗತವಾಗಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಹೊರ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಹೆದ್ದಾರಿಯಲ್ಲಿ ಮೆರವಣಿಗೆ: ಜಿಲ್ಲಾಧಿಕಾರಿ ಭವನವಿರುವ ಬೀರಸಂದ್ರದ ಚಪ್ಪರಕಲ್ಲುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಭವನದ ಆವರಣಕ್ಕೆ ಬಂದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಪ್ರತಿಭಟನೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗೆ ಮನವಿ: ನಮ್ಮ ಬೇಡಿಕೆ ಈಡೇರಿಸಲಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ತಿಳಿಸಿ ಸರ್ಕಾರದ ಗಮನಕ್ಕೆ ತರುವಂತೆ ಆಗ್ರಹಿಸಿದ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಶಾಸಕರ ಅನಿರೀಕ್ಷಿತ ಭೇಟಿ: ಪ್ರತಿಭಟನೆ ನಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ನೀಡುತ್ತಿದ್ದಾಗ ಅನಿರೀಕ್ಷಿತವಾಗಿ ಅಲ್ಲಿಗೆ ಆಗಮಿಸಿದ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಅವರು ಪ್ರತಿಭಟನಕಾರರ ಮನವಿ ಆಲಿಸಿದರು. ಮುಂದಿನ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದು ಭರವಸೆ ನೀಡಿದರು.