

ಹಾಸನ: ಪೌರಕಾರ್ಮಿಕರು ಹಗಲಿರಲು ಎನ್ನದೆ ಕಷ್ಟಪಟ್ಟು ದುಡಿಯುತ್ತಿದ್ದಾರೆ. ನಮ್ಮ ಸಂಘದಲ್ಲಿ ಇರುವಂತಹ ಪೌರಕಾರ್ಮಿಕರಿಗೆ ತಾರತಮ್ಯ ಮಾಡುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸುವ ಮೂಲಕ ನಮ್ಮ ಒಗ್ಗಟ್ಟನ್ನು ಹೊಡೆಯಲು ಸರ್ಕಾರ ಯತ್ನಿಸುತ್ತಿದೆ ಎಂದು ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪ್ರಭಾಕರ್ ಆರೋಪಿಸಿದರು.
ನಗರದ ನಗರಸಭೆ ಆವರಣದಲ್ಲಿ 12ನೇ ವರ್ಷದ ಪೌರಕಾರ್ಮಿಕರ ದಿನಾಚರಣೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಘದಲ್ಲಿ ಪೌರಕಾರ್ಮಿಕರಾಗಿ ಕಸ ಗೂಡಿಸುವವರಿಗೆ ನೇರ ನೇಮಕಾತಿ, ಸಂಬಳ ಹಾಗೂ ಊಟದ ಭತ್ಯೆ ಸೇರಿದಂತೆ ಕೆಲಸಗಳನ್ನು ನೀಡುತ್ತಿದ್ದಾರೆ. ಆದರೆ ಲೋಡರ್ಸ್, ಚಾಲಕರು, ನೀರು ಗಂಟಿಗರು ಹಾಗೂ ಇನ್ನಿತರೆ ಕಾರ್ಮಿಕರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಪೌರಕಾರ್ಮಿಕರ ಸುಮಾರು 12 ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ. ನಮ್ಮ ಕೂಗನ್ನು ಈ ಕ್ಷೇತ್ರದ ಶಾಸಕರಾಗಿರುವ ಎಚ್.ಪಿ. ಸ್ವರೂಪ್ ಅವರು ಸರ್ಕಾರಕ್ಕೆ ಕೇಳಿಸುವಂತೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿ ತಮ್ಮ ಸಮಸ್ಯೆಗಳ ಪಟ್ಟಿಯನ್ನು ಸಲ್ಲಿಸಿದರು.
ಪೌರಕಾರ್ಮಿಕರ ಕೊರತೆ ಇದ್ದು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡುತ್ತಿದೆ. ಆದರೆ ನೀರು ಗಂಟಿಗರು, ಲೋಡರ್ಸ್ ಇನ್ನಿತರೆ ಪೌರಕಾರ್ಮಿಕರನ್ನು ಕೂಡ ನೇರ ನೇಮಕಾತಿಯ ಮೂಲಕ ಸೇರಿಸಿಕೊಳ್ಳಬೇಕು. ಸರ್ಕಾರ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಅವರಿಗೆ ಒಂದು ಸೂರು ಕಲ್ಪಿಸುವ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಸಚಿವರ ಜತೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಜೀತ ಪದ್ಧತಿ ರೀತಿ ದಿನದ 24 ಗಂಟೆಯೂ ಕೆಲಸ ಮಾಡಿ ಕಾಯಂ ಆಗದೆ ನಿವೃತ್ತಿ ಹೊಂದಿರುವಂತಹ ಪೌರಕಾರ್ಮಿಕರನ್ನು ಸರ್ಕಾರ ಗುರುತಿಸಿ ಅವರಿಗೆ ಹತ್ತು ಲಕ್ಷ ರೂ. ಠೇವಣಿ ಇಡುವ ಮೂಲಕ ಅವರ ಜೀವನ ನಿರ್ವಹಣೆಗೆ ಸಹಕರಿಸಬೇಕು. ಮತ್ತು ಅವರ ಕುಟುಂಬದವರಿಗೆ ಪರ್ಯಾಯವಾಗಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷ ಆರ್ ಮೋಹನ್ ಮಾತನಾಡಿ, ದೇಶವನ್ನು ಕಾಯಲು ಸೈನಿಕರು ಎಷ್ಟು ಮುಖ್ಯವೋ ನಗರವನ್ನು ಸ್ವಚ್ಛವಾಗಿ ಇಡಲು ಪೌರಕಾರ್ಮಿಕರು ಅಷ್ಟೇ ಮುಖ್ಯ. ಅವರನ್ನು ಎಲ್ಲರೂ ಪ್ರೀತಿ ಗೌರವದಿಂದ ಕಾಣಬೇಕು. ಬೆಳಗ್ಗೆ ಎದ್ದು ಅವರ ಮನೆಯನ್ನು ಸ್ವಚ್ಛ ಮಾಡಿಕೊಳ್ಳದೆ ಪೌರಕಾರ್ಮಿಕರು ಇಡೀ ನಗರದ ಬೀದಿ ಬೀದಿಗಳನ್ನು, ಸಾರ್ವಜನಿಕರ ಮನೆಯ ಮುಂಭಾಗ ಸ್ವಚ್ಛ ಮಾಡುತ್ತಾರೆ. ಇಂತಹವರ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಪೌರಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಕಾರ್ಮಿಕರನ್ನು ಒಂದು ದಿನ ಗೌರವದಿಂದ ಕಾಣದೆ ಪ್ರತಿದಿನವೂ ಕೂಡ ಅವರನ್ನು ಗೌರವ ಪ್ರೀತಿಯಿಂದ ಕಾಣಬೇಕು. ನಮ್ಮ ತಂದೆಯವರು ಕೂಡ ನಗರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ, ಶಾಸಕರಾಗಿ ಕೆಲಸ ಮಾಡಿದ್ದಾರೆ. ನಾನು ಕೂಡ ಹಿಂದಿನಿಂದಲೂ ಪೌರಕಾರ್ಮಿಕರ ಸಮಸ್ಯೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ನಿಮ್ಮೆಲ್ಲ ಸಮಸ್ಯೆಗಳ ಜತೆಯಾಗಿ ನಿಂತು ನಿಮಗೆ ಸೂಕ್ತ ರಕ್ಷಣೆ ಜತೆಗೆ ನಿಮಗೆ ಸಿಗಬೇಕಾದಂತಹ ಸೌಲಭ್ಯವನ್ನು ಕೊಡಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರು ಮೆರವಣಿಗೆ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಸತೀಶ್ ಕುಮಾರ್, ಸದಸ್ಯರಾದ ಸಿ.ಆರ್. ಶಂಕರ್, ಯೋಗೇಂದ್ರ ಬಾಬು, ಮಂಜಣ್ಣ, ದಯಾನಂದ್, ಮಂಜುನಾಥ್, ಮಹೇಶ್, ರಫೀಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಜಗದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರುಕೆಲ ಪೌರಕಾರ್ಮಿಕರಿಂದ ಆಕ್ರೋಶ
ಪೌರಕಾರ್ಮಿಕರ ದಿನಾಚರಣೆ ನಡೆಯುತ್ತಿದ್ದ ಸಭಾಂಗಣದಲ್ಲಿ ಕೆಲ ಪೌರಕಾರ್ಮಿಕರು, ಕೆಲವರನ್ನು ಓಲೈಸುವುದು, ಇನ್ನೂ ಕೆಲವರನ್ನು ನಿರ್ಲಕ್ಷೃ ಮಾಡುವುದು ನಡೆಯುತ್ತಿದೆ. ತಾರತಮ್ಮ ಮಾಡುವ ಮೂಲಕ ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಹೋಗಲು ಮುಂದಾದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮೋಹನ್ ಮಧ್ಯಪ್ರವೇಶ ಮಾಡಿ ಅವರನ್ನು ಸಮಾಧಾನಪಡಿಸಿದರು.