ಪೌರಕಾರ್ಮಿಕರ ಆರೋಗ್ಯಕ್ಕೆ ಯೋಗಾಭ್ಯಾಸ ಸಹಕಾರಿ

18 ckm 4
ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಸಿ.ಟಿ.ರವಿ, ಶೀಲಾ ದಿನೇಶ್‌, ಲಲಿತಾ ನಾಯ್ಕ, ವರಸಿದ್ಧಿ ವೇಣುಗೋಪಾಲ್‌, ಕವಿತಾ ಶೇಖರ್‌, ಎ.ಸಿ.ಲಕ್ಷ್ಮಣ ಗೌಡ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಪೌರಕಾರ್ಮಿಕರು ಆರೋಗ್ಯ, ಮಾನಸಿಕ ಸದೃಢವಾಗಿರಲು ದಿನದ ಒಂದು ಗಂಟೆ ಯೋಗಾಭ್ಯಾಸದ ತರಬೇತಿ ನೀಡುವ ಅಗತ್ಯವಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಶನಿವಾರ ನಗರಸಭೆ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರು ದುಶ್ಚಟ, ಮಾದಕ ವ್ಯಸನಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು ಆರೋಗ್ಯವಾಗಿದ್ದಾಗ ಮಾತ್ರ ಎಲ್ಲ ನಾಗರಿಕರು ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.

ಕೆಲವು ಪೌರಕಾರ್ಮಿಕರನ್ನು ಸರ್ಕಾರ ಖಾಯಂಗೊಳಿಸಿರುವ ಮಾದರಿಯಲ್ಲಿ ನೀರುಗಂಟಿಗಳನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಖಾಯಂಗೊಳಿಸುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು.

ಡಾ. ಬಿ.ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯದಂತೆ ಸಮಸಮಾಜ ನಿರ್ಮಾಣವಾಗಬೇಕೆಂಬ ಅವರ ಕನಸು ಇಂದು ಒಂದೇ ವೇದಿಕೆಯಲ್ಲಿ ಆಸೀನರಾಗಲು ಕಾರಣ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಶರಣರ ಆಶಯ ಕಾರಣ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಾಯಕ ಸಂಸ್ಕೃತಿಗೆ ಗೌರವ ಕೊಡುವ ಉದ್ದೇಶವೇ ಪೌರಕಾರ್ಮಿಕ ದಿನಾಚರಣೆಯ ಉದ್ದೇಶ ಎಂದು ಹೇಳಿದ ಅವರು, ಸ್ವಚ್ಚ ಕಾಯಕ ಮಾಡುವ ಪೌರಕಾರ್ಮಿಕರನ್ನು ಗೌರವದಿಂದ ಕಂಡಾಗ ಮಾತ್ರ ಸಮಾನತೆ, ಆರೋಗ್ಯ ಲಭಿಸುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ, ಭೇದಕ್ಕೆ ಆಸ್ಪದವಿಲ್ಲದೆ ದುಡಿಯುವ ವರ್ಗಕ್ಕೆ ಗೌರವ ನೀಡಬೇಕೆಂಬ ಉದ್ದೇಶದೊಂದಿಗೆ ಪೌರಕಾರ್ಮಿಕರ ಪಾದಪೂಜೆ ಮಾಡಿ ಕಾಯಕ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.

೭೪ ಮನೆಗಳಲ್ಲಿ ೨೪ ಬಾಕಿ ಇದ್ದು, ಉಳಿದ ಕಾರ್ಮಿಕರಿಗೂ ಮನೆಗಳನ್ನು ನಿರ್ಮಿಸಿಕೊಡಬೇಕು. ೩೫ ನೌಕರರನ್ನು ಖಾಯಂ ಮಾಡಿದ್ದು, ಉಳಿದವರನ್ನು ಖಾಯಂ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಕೂಡಲೇ ಇದನ್ನು ನಿವಾರಿಸಿ ಖಾಯಂಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಆಯುಕ್ತ ಬಿ.ಸಿ ಬಸವರಾಜ್ ಸ್ವಾಗತಿಸಿ ಮಾತನಾಡಿ, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ ೩೫ ರೂ. ಗೌರವಧನ, ಸಂಕಷ್ಟ ಭತ್ಯೆ, ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಮುಂತಾದ ಸೌಲಭ್ಯಗಳನ್ನು ಹಂತ ಹಂತವಾಗಿ ನೀಡುವುದಾಗಿ ಹೇಳಿದರು.

ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ಲಲಿತಾ ನಾಯ್ಕ್, ಮಾಜಿ ಅಧ್ಯಕ್ಷರಾದ ಕವಿತಾ ಶೇಖರ್, ವರಸಿದ್ಧಿ ವೇಣುಗೋಪಾಲ್ ಮಾತನಾಡಿದರು.

ನಗರಸಭೆ ಸದಸ್ಯರಾದ ಎ.ಸಿ ಕುಮಾರ್‌ಗೌಡ, ಲಕ್ಷಣ್‌, ಗುರುಮಲ್ಲಪ್ಪ, ಪರಮೇಶ್ ರಾಜ್ ಅರಸ್, ಸಿ.ಪಿ ಲಕ್ಷ್ಮಣ್, ಅರುಣ್‌ಕುಮಾರ್, ಗೋಪಿ, ರೂಪಾ ಕುಮಾರ್, ಶಧಾಬ್ ಅಲಂ ಖಾನ್, ವಿಫುಲ್ ಕುಮಾರ್ ಜೈನ್ ಮತ್ತಿತರರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿ ಆವರಣದಿಂದ ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರದೊಂದಿಗೆ ಜಾನಪದ ಕಲಾತಂಡಗಳ ಮೂಲಕ ಮೆರವಣಿಗೆ ಹೊರಟ ಪೌರ ಕಾರ್ಮಿಕರು ಹಾಗೂ ನಗರಸಭೆ ಸಿಬ್ಬಂದಿ ಎಂ.ಜಿ ರಸ್ತೆ ಮೂಲಕ ಸಾಗಿ ನಗರಸಭೆ ಆವರಣವನ್ನು ತಲುಪಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net