

ಕುಶಾಲನಗರ: ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತುಗಳನ್ನು ಪ್ರತ್ಯೇಕ ಆದೇಶವಿಲ್ಲದೆ ಪೌರ ಸೇವಾ ನೌಕರರಿಗೂ ವಿಸ್ತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರ ಸೇವಾ ನೌಕರರ ಸಂಘದಿಂದ ಕುಶಾಲನಗರದಲ್ಲೂ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದೆ.
ಈ ಸಂದರ್ಭ ಮಾತನಾಡಿದ ಪೌರ ಸೇವಾ ನೌಕರರ ಸಂಘದ ಕುಶಾಲನಗರ ಘಟಕದ ಅಧ್ಯಕ್ಷ ಎಸ್.ಆರ್. ಗಣೇಶ್, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಹಲವಾರು ಬೇಡಿಕೆಗಳು ಸುಮಾರು ದಶಕಗಳಿಂದ ಬಾಕಿ ಉಳಿದಿದ್ದು, ಈ ಬೇಡಿಕೆಗಳನ್ನು ಈವರೆಗೂ ಈಡೇರಿಸಿಲ್ಲ. ಈ ಕುರಿತಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಏ. 12ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದ ಸಂಘದ ರಾಜ್ಯದ ಪರಿಷತ್ ಸಭೆಯಲ್ಲಿ ಪೌರಸೇವಾ ನೌಕರರಗಳ ಬೇಡಿಕೆಗಳ ಬಗ್ಗೆ ಒಂದು ತಿಂಗಳ ಮುಷ್ಕರ ನೋಟಿಸನ್ನು ಸರ್ಕಾರಕ್ಕೆ ಸಲ್ಲಿಸಲು ಮತ್ತು ಈ ಅವಧಿಯೊಳಗೆ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ನಿರ್ಣಯಿಸಲಾಗಿತ್ತು.
ನೋಟಿಸ್ ಕೊಟ್ಟು ಒಂದು ತಿಂಗಳ ಅವಧಿ ಮುಗಿದಿದೆ. ಆದರೆ ಈವರೆಗೆ ಸಂಘದ ಪದಾಧಿಕಾರಿಗಳ ಸಭೆ ಕರೆಯದೆ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಸೋಮವಾರದಿಂದ ರಾಜ್ಯಾದ್ಯಂತ ಸ್ವಚ್ಛತೆ ಮತ್ತು ಕಚೇರಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ. ಜೂ.5 ರಿಂದ ನೀರು ಸರಬರಾಜು ಸಹ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪೌರ ಸೇವಾ ನೌಕರರ ಸಂಘದ ಕುಶಾಲನಗರ ಘಟಕದ ಕಾರ್ಯದರ್ಶಿ ನಂಜುಂಡ, ಉಪಾಧ್ಯಕ್ಷೆ ರಶ್ಮಿ, ಪದಾಧಿಕಾರಿಗಳು ಹಾಗೂ ನೌಕರರು ಇದ್ದರು.