ಪೌರ ನೌಕರರಿಗೆ ಭದ್ರತೆ ಕೊಡಿ

CMC protest
Published on

ಬೀದರ್: ಕಲಬುರಗಿ ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ಮೇಲಿನ ಹಲ್ಲೆ ಘಟನೆ ಖಂಡಿಸಿ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಶಾಖೆಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಇಲ್ಲಿಯ ಹರಳಯ್ಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪೌರ ನೌಕರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ನಕಲಿ ಬಿಲ್ ಪಾವತಿಗೆ ಒಪ್ಪದ ಕಾರಣ ಮುಖ್ಯಾಧಿಕಾರಿ ಅಭಯಕುಮಾರ ಅವರ ಮೇಲೆ ಪುರಸಭೆ ಸದಸ್ಯ ಆನಂದಕುಮಾರ ಟೈಗರ್ ಮತ್ತು ಶಶಿಕುಮಾರ ಮೇತ್ರಿ ಎನ್ನುವವರು ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಖಂಡನೀಯ. ಕೂಡಲೇ ಇವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಹಲ್ಲೆ ನಡೆಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಮುಖ್ಯಾಧಿಕಾರಿಗೆ ನ್ಯಾಯ ಕೊಡಬೇಕು. ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರಿಗೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. ಬೇಡಿಕೆ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ನಗರಸಭೆ ಆಯುಕ್ತ ರವೀಂದ್ರ ಅಂಗಡಿ, ಎಇಇ ರಾಜಶೇಖರ ಮಠ, ಕಚೇರಿ ವ್ಯವಸ್ಥಾಪಕ ನಾಗಣ್ಣ ಪರೀಟ, ಪೌರಸೇವಾ ನೌಕರರ ಸೇವಾ ಸಂಘದ ಬೀದರ್ ಶಾಖೆ ಅಧ್ಯಕ್ಷ ಲೋಕೇಶ ಯಾದಗಿರಿ, ಕಾರ್ಯದರ್ಶಿ ಸುಭಾಷ ಮನೋಹರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net