

ಹುಮನಾಬಾದ್: ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು ಎಂದು ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯಕ್ತ ಪ್ರಕಾಶ ಕುದರಿ ನುಡಿದರು.
ಹಳ್ಳಿಖೇಡ(ಬಿ) ಪಟ್ಟಣದ ಪುರಸಭೆಯಲ್ಲಿ ಬುಧವಾರ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ಸ್ವಚ್ಛತಾ ರೂವಾರಿಗಳು. ಕೊರೋನಾದಂತ ಸಂದಿಗ್ಧ ಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು.
ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಸಮಾಜ ಪ್ರತಿಕ್ಷಣ ತಾಯ್ತನದಿಂದ ಕಾಣಬೇಕು. ಅದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ ಎಂದು ಹೇಳಿದರು.
ಪೌರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸೈಯದ್ ಖಾನ್ ಮಾತನಾಡಿ, ಪೌರ ಕಾರ್ಮಿಕರ ಸೇವೆ ಅಮೋಘ. ಸಂಘ ಸದಾ ಅವರ ಹಿತ ಕಾಪಾಡುತ್ತದೆ ಎಂದರು. ಪುರಸಭೆಯ ಎಲ್ಲ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಧನ್ನೂರಕರ್, ಜಿಲ್ಲಾ ಖಜಾಂಚಿ ಸಂತೋಷ ಬಿರಾದಾರ, ಮುಖ್ಯಾಧಿಕಾರಿ ಅಶೋಕ ಚೆನ್ನಕೊಟೆ, ಪ್ರಮುಖರಾದ ಸುನೀಲಕುಮಾರ ಇಮಾಮಪುರೆ, ವಿಜಯದೀಪ, ಜೆಇ ಅರುಣಕುಮಾರ, ಲೆಕ್ಕಿಗ ಗಂಗಾದೇವಿ, ಸುಶೀಲಕುಮಾರ, ಕರಬಸಪ್ಪ , ಸಂತೋಷ ಬಿರಾದಾರ ಇತರರಿದ್ದರು.
ಕಂದಾಯ ನಿರೀಕ್ಷಕ ಶಿವಕುಮಾರ ಗೌಡನಗೂರು ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು. ಅಭಿಷೇಕ ವರ್ಮಾ ನಿರೂಪಣೆ ಮಾಡಿದರು.