ಪೌರ ಕಾರ್ಮಿಕರು ಕಾಯಕ ಯೋಗಿಗಳು

Aanjaneya
Published on

ಚಿತ್ರದುರ್ಗ: ಜನರ ಆರೋಗ್ಯಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿರುವ ಪೌರಕಾರ್ಮಿಕರು ನಿಜವಾದ ಕಾಯಕಯೋಗಿಗಳು ಎಂದು ಮಾಜಿ ಸಚಿವ ಎಚ್. ಆಂಜನೇಯ ಬಣ್ಣಿಸಿದರು.

ರಾಜ್ಯ ಪೌರಕಾರ್ಮಿಕರ ಸಂಘದಿಂದ ಗಾಯತ್ರಿ ಕಲ್ಯಾಣ ಮಂಪಟದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಪೌರಕಾರ್ಮಿಕರ ಸಮಾಲೋಚನಾ ಸಭೆಯಲ್ಲಿ ಪ್ರೊ.ಬಿ. ಕೃಷ್ಣಪ್ಪ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪೌರಕಾರ್ಮಿಕರ ಬದುಕು ಅತ್ಯಂತ ನಿಕೃಷ್ಟವಾಗಿದೆ. ಲಕ್ಷ ಕೊಟ್ಟರೂ ಯಾರೂ ಮಾಡದ ಕೆಲಸ ಮಾಡುತ್ತಾರೆ. ಶೌಚಗುಂಡಿ, ಚರಂಡಿಗೆ ಇಳಿದು ಕೆಲಸ ಮಾಡುವುದು ಅತ್ಯಂತ ಅಮಾನವೀಯ. ಆದರೂ ಸಮಾಜದ ಹಿತದೃಷ್ಟಿಯಿಂದ ಎಲ್ಲರ ಆರೋಗ್ಯ ಕಾಪಾಡುವ ಶ್ರಮಿಕ ವರ್ಗವಾಗಿ ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದಷ್ಟು ಅನುಕೂಲ ಪೌರಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒದಗಿಸಿದ್ದಾರೆ. ಇನ್ನಷ್ಟು ಬೇಡಿಕೆಗಳು ಶೀಘ್ರ ಈಡೇರಿಸುವ ಭರವಸೆ ಇದೆ. ನಾನೂ ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದು ಆಶ್ವಾಸನೆ ನೀಡಿದರು.

ಪೌರಕಾರ್ಮಿಕರು ಬದಲಾಗಬೇಕು. ಆರೋಗ್ಯದ ಕಡೆ ಗಮನ ಹರಿಸಬೇಕು. ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಗೆ ಆದ್ಯತೆ ನೀಡಬೇಕು. ಗಳಿಸಿದ ಹಣ ಕುಡಿತಕ್ಕೆ ವೆಚ್ಚ ಮಾಡದೆ ಉತ್ತಮ ಜೀವನ ನಡೆಸಲು ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಯುಜಿಡಿ, ಕಸ ಸಂಗ್ರಹಣೆ ವಾಹನ ಚಾಲಕರು, ಕಸ ಎತ್ತುವವರು, ಕಸ ವಿಂಗಡಿಸುವವರನ್ನು ಪೌರಕಾರ್ಮಿಕರೆಂದು ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಜೊತೆಗೆ ಗೃಹಭಾಗ್ಯ ಯೋಜನೆಯಡಿ ಎಲ್ಲ ಪೌರಕಾರ್ಮಿಕರಿಗೆ ಮನೆ, ನಿವೇಶನ ಒದಗಿಸಲು ತಕ್ಷಣ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಪೌರಕಾರ್ಮಿಕರ ಕೆಲಸ ಯಾರೂ ಮಾಡುವುದಿಲ್ಲ. ಆದರೆ, ಅವರಿಗೆ ವೇತನ ಸೇರಿ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡಲು ಮೀನಾಮೇಷ ಎಣಿಸಬಾರದು. ಜೊತೆಗೆ ಅವರ ನೇಮಕಾತಿ ಸಂದರ್ಭದಲ್ಲಿಯೇ ನಿವೇಶನ, ವಸತಿ ಸೌಲಭ್ಯ ಕೊಡಬೇಕು. ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಬದುಕು ರಕ್ಷಿಸುವ ಕಾರ್ಯ ಸರ್ಕಾರದ್ದಾಗಿದೆ ಎಂದು ಒತ್ತಾಯಿಸಿದರು.

ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್, ಜಿಲ್ಲಾಧ್ಯಕ್ಷ ಡಿ. ದುರುಗೇಶಪ್ಪ, ಪ್ರಧಾನ ಕಾರ್ಯದರ್ಶಿ ಕೆ. ರಾಜು, ನಗರಸಭೆ ಅಧ್ಯಕ್ಷೆ ಸುಮಿತಾ, ಸದಸ್ಯ ಗೊಪ್ಪೆ ಮಂಜುನಾಥ್, ಪೌರಾಯುಕ್ತೆ ಎಂ. ರೇಣುಕಾ, ಜಿಪಂ ಮಾಜಿ ಸದಸ್ಯ ಆರ್. ನರಸಿಂಹರಾಜು, ಜಗದೀಶ್, ಓಬಳೇಶ್, ಯತಿರಾಜ್, ದಾಸ್, ಗಂಗಾಧರ್, ಮಂಜುನಾಥ್ ನಾಯಕನಹಟ್ಟಿ, ಹರ್ಷದ್, ನಾಗಪ್ಪ ಹೊಸದುರ್ಗ, ಚಕ್ರವರ್ತಿ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net