

ಇಂಡಿ: ನಮ್ಮ ಆರೋಗ್ಯ ಚೆನ್ನಾಗಿರಲು ತಮ್ಮ ಆರೋಗ್ಯದ ಲಕ್ಷ ವಹಿಸದೇ ಸ್ವಚ್ಛತೆಯ ಕಡೆಗೆ ತಮ್ಮ ಜೀವನ ಮುಡುಪಾಗಿಟ್ಟ ಪೌರ ಕಾರ್ಮಿಕರನ್ನು ಗೌರವಿಸಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಬಸವೇಶ್ವರ ವೃತ್ತದ ಆವರಣದಲ್ಲಿ ಸ್ವಾತಂತ್ರೊೃೀತ್ಸವದ ಅಂಗವಾಗಿ ಹಮ್ಮಿಕೊಂಡ 10 ದಿನಗಳ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು.
ಸರ್ಕಾರದ ಇಲಾಖೆಗಳ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛತೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದು,್ದ ಇದು ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೇ ಪ್ರತಿದಿನವೂ ಎಲ್ಲರೂ ಸ್ವಚ್ಛತೆಯ ಕಡೆಗೆ ಗಮನಹರಿಸಿದರೆ ಪುರಸಭೆ ಕಾರ್ಮಿಕರು ಮಾಡುವ ಕೆಲಸಕ್ಕೆ ಗೌರವ ಸಿಗುತ್ತದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಪಟ್ಟಣದ ಜನಸಂಖ್ಯೆ 47 ಸಾವಿರದಷ್ಟಿದ್ದು, ಪಟ್ಟಣಕ್ಕೆ ಬೇರೆ ಗ್ರಾಮಗಳಿಂದ ಬರುವವರ ಸಂಖ್ಯೆಯು ಅಷ್ಟೇ ಇದೆ. ಪುರಸಭೆಯಲ್ಲಿ ಕೇವಲ 72 ಕಾರ್ಮಿಕರು ಸ್ವಚ್ಛತೆಗಾಗಿದ್ದು, ಒಬ್ಬ ಕಾರ್ಮಿಕರಿಗೆ 700 ಜನರ ಸ್ವಚ್ಛತೆಯ ಕಡೆಗೆ ಗಮನ ನೀಡಬೇಕಾಗುತ್ತದೆ. ಹೀಗಾಗಿ ಜನತೆಯಲ್ಲಿ ತಿಳುವಳಿಕೆ ಮೂಡಿಸಿ ಸ್ವಚ್ಛತೆಯ ಕಾರ್ಯದಲ್ಲಿ ಸಹಕರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೀಶ ಕೆ., ಪ್ರಾಧ್ಯಾಪಕ ಎನ್ನೆಸ್ಸೆಸ್ ಅಧಿಕಾರಿ ವಿಶ್ವಾಸ ಕೋರವಾರ, ಡಾ. ಶ್ರೀಕಾಂತ ರಾಠೋಡ, ದೇವೆಂದ್ರ ಕುಂಬಾರ, ಹುಚ್ಚಪ್ಪ ಶಿವಶರಣ, ಪಿ.ಎಸ್. ಚವಡಿಹಾಳ, ಸಿದರಾಯ ನಂದರಗಿ, ಎಚ್.ಎಚ್. ಗುನ್ನಾಪುರ ಸೇರಿದಂತೆ ಪುರಸಭೆ ಸಿಬ್ಬಂದಿ, ಜಿ.ಆರ್. ಗಾಂಧಿ ಮಹಾವಿದ್ಯಾಲಯದ ಎನ್ನೆಸ್ಸೆಸ್ ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸ್ವಚ್ಛ ಇಂಡಿ ಮತ್ತು ಎಸ್ ಫಾರ್ ಇಂಡಿ ಘೋಷಣೆಗಳನ್ನು ಕೂಗಿದರು. ಧರ್ಮರಾಜ ಮುಜಗೊಂಡ ಸ್ವಾಗತಿಸಿ ನಿರೂಪಿಸಿದರು.