

ಚಿತ್ರದುರ್ಗ: ಹೊರಗುತ್ತಿಗೆ ರದ್ದುಪಡಿಸಿ ಈಗಿರುವ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಸರ್ಕಾರಕ್ಕೆ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೌರ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರದಿಂದಲೇ ಮಾಸಿಕ ವೇತನ ಪಾವತಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಹೊರಗುತ್ತಿಗೆ ರದ್ದುಗೊಳಿಸಲು 2017ರಿಂದ ಹೋರಾಟ ನಡೆಸುತ್ತಿದ್ದೇವೆ. ಪೌರ ಕಾರ್ಮಿಕರು, ವಾಹನ ಚಾಲಕರು, ಗಟಾರದಲ್ಲಿ ಕೆಲಸ ಮಾಡುವವರು, ಕಸ ವಿಂಗಡಿಸುವವರು ಹೀಗೆ ಹಲವು ಬಗೆಯ ಪೌರ ಕಾರ್ಮಿಕರು ಆರೋಗ್ಯ ಹಾಗೂ ಜೀವನ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ 39 ಸಾವಿರ ಪೌರ ಕಾರ್ಮಿಕರಿದ್ದು, ಈ ಪೈಕಿ 29,300 ಮಂದಿಯನ್ನು ಕಾಯಂಗೊಳಿಸಲಾಗಿದೆ. ಉಳಿದವರಿಗೇಕೆ ಕಾಯಂ ಮಾಡಿಲ್ಲ. ಬೇರೆ ಜಿಲ್ಲೆಗಳಲ್ಲಿ ಪೌರ ಕಾರ್ಮಿಕರಿಗೆ ಸರ್ಕಾರದಿಂದ ನಿವೇಶನ ವಿತರಿಸಲಾಗಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲೂ ಈ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಒಳ ಮೀಸಲಾತಿ ಜಾರಿ ಆಗುವವರೆಗೂ ನೇಮಕಾತಿ ತಡೆ ಹಿಡಿದಿದ್ದೇವೆಂಬ ನೆಪ ಹೇಳುವುದು ಬೇಡ. ತುರ್ತಾಗಿ ಪೌರ ಕಾರ್ಮಿಕರು, ಪೌರ ನೌಕರರನ್ನು ಕಾಯಂಗೊಳಿಸಬೇಕು ಎಂದು ಮನವಿ ಮಾಡಿದರು.
ಕೆ.ಬಿ.ಓಬಳೇಶ್ ಮಾತನಾಡಿ, ಹಿಂದಿನ ಬಿಜೆಪಿ, ಈಗಿನ ಕಾಂಗ್ರೆಸ್ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ಕಾಯಂಗೊಳಿಸುವ ಭರವಸೆ ಕೊಟ್ಟಿದ್ದು, ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದುಕೊಳ್ಳಲಿ. 2018 ರಿಂದ ಈವರೆಗೂ ರಾಜ್ಯದಲ್ಲಿ 148 ಪೌರ ಕಾರ್ಮಿಕರು ನಿಧನರಾಗಿದ್ದಾರೆ. ಆಗಿಂದಾಗ್ಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. 1,010 ಮಂದಿ ಜಿಲ್ಲೆಯಲ್ಲಿದ್ದು, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಕೋರಿದರು.
ಪದಾಧಿಕಾರಿಗಳಾದ ಡಿ.ದುರುಗೇಶ್, ಜಗದೀಶ್, ರಾಜಣ್ಣ ಇತರರಿದ್ದರು.