

ರಾಯಚೂರು: ದಿನಗೂಲಿ ಪೌರ ಕಾರ್ಮಿಕರ ಬಾಕಿ ವೇತನ ಪಾವತಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ನಗರಸಭೆ ಕಚೇರಿಗೆ ದಿನಗೂಲಿ ಪೌರ ಕಾರ್ಮಿಕರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಂತರ ನಗರಾಭಿವೃದ್ಧಿ ಕೋಶದ ಯೋಜನಾಕಾರಿ ಡಾ.ಹಂಪಣ್ಣ ಸಜ್ಜನ್‌ಗೆ ಮನವಿ ಸಲ್ಲಿಸಿ, ಕಳೆದ ಮೂರು ತಿಂಗಳಿಂದ ವೇತನ ಪಾವತಿಯಾಗದೆ ಕಾರ್ಮಿಕರು ಕುಟುಂಬ ನಿರ್ವಹಣೆಗೆ ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.
ನಗರಸಭೆ ವ್ಯಾಪ್ತಿಯಲ್ಲಿನ 350ಕ್ಕೂ ಹೆಚ್ಚು ದಿನಗೂಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಿ ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ರಾಯಚೂರು ನಗರಸಭೆಯಲ್ಲಿ ಪೌರ ಕಾರ್ಮಿಕರ ಸಮಸ್ಯೆಯಿಂದ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ 130 ದಿನಗೂಲಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದರು.
ನೇಮಕ ಮಾಡಿಕೊಂಡ ನಮತರ ಪ್ರತಿ ತಿಂಗಳು ವೇತನ ಪಾವತಿ ಮಾಡಲಾಗುತ್ತಿತ್ತು. ಆದರೆ ಕಳೆದ 3 ತಿಂಗಳಿಂದ ವೇತನ ಪಾವತಿ ಮಾಡಲಾಗಿಲ್ಲ. ಇದರಿಂದ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿತ್ತು. ಕೂಡಲೇ ಬಾಕಿ ವೇತನ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಸ್.ರಾಜು, ನರಸಿಂಹಲು, ಪೌರ ಕಾರ್ಮಿಕರಾದ ಯಂಕೋಬ, ಹುಸೇನಪ್ಪ, ನರಸಮ್ಮ, ಪಾರ್ವತಿ, ಜಂಬಮ್ಮ, ಹನುಮಂತಿ, ರಾಜು, ರಾಜೇಂದ್ರ, ಶಿವು ಪಾಲ್ಗೊಂಡಿದ್ದರು.