ಪೌರ ಕಾರ್ಮಿಕರ ಪ್ರತಿಭಟನೆ ಅಂತ್ಯ

web3
ಖಾನಾಪುರ ಪಟ್ಟಣ ಪಂಚಾಯಿತಿ ಎದುರು ಮೂರು ತಿಂಗಳ ಸಂಬಳ ಬಿಡುಗಡೆಗೆ ಆಗ್ರಹಿಸಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಶಾನೂರ್ ಗುಡ್ಲಾರ್ ಇತರರಿದ್ದರು.
Published on

ಖಾನಾಪುರ: ಮೂರು ತಿಂಗಳಿಂದ ವೇತನ ನೀಡಲು ನಿರಾಕರಿಸಿದ ಮುಖ್ಯಾಧಿಕಾರಿ ರಾಜು ವಠಾರ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಪೌರ ಕಾರ್ಮಿಕರು ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಆರಂಭಿಸಿದ್ದ ಧರಣಿ ಶಾಸಕ ವಿಠ್ಠಲ ಹಲಗೇಕರ ಹಾಗೂ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಅವರ ಭರವಸೆ ಮೇರೆಗೆ ಶುಕ್ರವಾರ ಮುಕ್ತಾಯಗೊಂಡಿದೆ.

ಬಾಕಿ ವೇತನ ಮತ್ತು ಪಿಎ್ ನಿಧಿ ಪಾವತಿಸುವ ಭರವಸೆಯನ್ನೂ ನೀಡಲಾಯಿತು. ಪಟ್ಟಣ ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 40ಕ್ಕೂ ಹೆಚ್ಚು ನೌಕರರು ವೇತನ ನೀಡುವಂತೆ ಒತ್ತಾಯಿಸಿದಾಗ ತೆರಿಗೆ ವಸೂಲಿ ಮಾಡಿ ನಂತರ ಸಂಬಳದ ಬಗ್ಗೆ ಮಾತಾಡಿ ಎಂಬ ಬೇಜವಾಬ್ದಾರಿ ಉತ್ತರ ನೀಡಿದರು.

ಇದರಿಂದ ಕುಪಿತಗೊಂಡ ಕಾರ್ಮಿಕರು ಗುರುವಾರದಿಂದ ಪ್ರತಿಭಟನೆ ಆರಂಭಿಸಿದ್ದರು. ಶುಕ್ರವಾರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮುಂದುವರಿಸಿದ್ದರು. ಸುದ್ದಿ ತಿಳಿದು ಶಾಸಕ ಹಲಗೇಕರ ಸಮಸ್ಯೆ ಆಲಿಸಿ, ಮುಖ್ಯಾಧಿಕಾರಿ ವರ್ಗಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.

ನೂತನ ಮುಖ್ಯಾಧಿಕಾರಿ ನೇಮಕವಾಗುವವರೆಗೆ ರಾಜಶ್ರೀ ವೆರ್ಣೇಕರಗೆ ಅವರಿಗೆ ಪ್ರಭಾರಿ ನೀಡಬೇಕು ಎಂದು ಸೂಚಿಸಿದರು. ಪೊಲೀಸ್ ನಿರೀಕ್ಷಕ ಮಂಜುನಾಥ ನಾಯ್ಕ, ಬಿಜೆಪಿ ಮುಖಂಡ ಪಂಡಿತ ಓಗ್ಲೆ, ಪಪಂ ಸದಸ್ಯ ರಫೀಕ್ ವಾರಿಮನಿ, ಪ್ರಕಾಶ ಬೈಲೂರಕರ, ನಾರಾಯಣ ಮಯೇಕರ, ಅಪ್ಪಯ್ಯ ಕೊಡೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net