ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ: ನಿವೇಶನ ರಚನೆಗೆ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ

ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ: ನಿವೇಶನ ರಚನೆಗೆ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ
Published on

ಹಾಸನ: ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ ಕಾಯಿದಿರಿಸಿರುವ ಜಾಗಕ್ಕೆ ನಿವೇಶನ ರಚಿಸಿ ವಿನ್ಯಾಸ ಅನುಮೋದನೆ ಸಂಬಂಧ ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಾನ್ಯುಯಲ್ ಸ್ಕ್ಯಾವೆಂಜರ್‌ಗಳು ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013 ರನ್ವಯ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಸಲಕರಣೆ, ಬೆಳಗಿನ ಉಪಹಾರ ನೀಡಲು ಕ್ರಮವಹಿಸುವುದರ ಜೊತೆಗೆ ವಸ್ತ್ರ ಬದಲಾವಣೆ ಮಾಡಿಕೊಳ್ಳಲು ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಕ್ರಮವಹಿಸುವಂತೆ ತಿಳಿಸಿದರು.
ಸಕಲೇಶಪುರ ಸುಭಾಷ್ ಮೈದಾನದ ಬಳಿಯಿರುವ ಹಿಂದೂ ರುದ್ರಭೂಮಿಗೆ ರಸ್ತೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಮತ್ತು ಹಿರಿಸಾವೆ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನ ವೇತನ ಪಾವತಿಸಲು ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಲಕ್ಷ್ಮೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಜಗದೀಶ್, ಸಮಿತಿ ಸದಸ್ಯರಾದ ಪಳನಿ, ಶಂಕರ್, ಶ್ರೀನಿವಾಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net