

ಮೈಸೂರು: ಪೌರಕಾರ್ಮಿಕರಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಗ್ಲೌಸ್, ಶೂ ಮತ್ತು ಮಾಸ್ಕ್ ನೀಡಬೇಕು. ಕಾಲ ಕಾಲಕ್ಕೆ ಅವರ ಆರೋಗ್ಯ ತಪಾಸಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಯೋಗಕ್ಷೇಮದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರಕಾರ್ಮಿಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದರಿಂದ ಪೌರಕಾರ್ಮಿಕರಿಗೆ ಇರುವ ಕೆಲಸದ ಒತ್ತಡ ಕಡಿಮೆ ಮಾಡಬಹುದು. ಪೌರಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಸೂಕ್ತ ನೆರವು ಹಾಗೂ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತಿಷ್ಠಿತ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳನ್ನು ದಾಖಲಾತಿ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.
ನೇರ ಪಾವತಿ ಪೌರಕಾರ್ಮಿಕರ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಜಿಲ್ಲೆಯಲ್ಲಿರುವ ಒಟ್ಟು ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳ ವಿವರ, ಕಾಯಂ ಪೌರಕಾರ್ಮಿಕರು, ನೇರ ಪಾವತಿ ಪೌರಕಾರ್ಮಿಕರು, ಖಾಲಿ ಇರುವ ಹುದ್ದೆಗಳು ಮತ್ತು ಅವರಿಗಿರುವ ಯೋಜನೆಗಳು ಮತ್ತು ಸೌಲಭ್ಯಗಳ ಸಂಪೂರ್ಣ ವಿವರವನ್ನು ಮುಂದಿನ ಸಭೆಯೊಳಗೆ ನೀಡಬೇಕೆಂದು ನಿರ್ದೇಶನ ನೀಡಿದರು.
ಸಮಿತಿ ಸದಸ್ಯ ರಾಚಯ್ಯ ಮಾತನಾಡಿ, ಖಾಯಂ ಹಾಗೂ ನೇರ ಪಾವತಿ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು.ನೇರಪಾವತಿ ಪೌರಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬದವರಿಗೆ ಅನುಕಂಪ ಆಧಾರದಲ್ಲಿ ನೌಕರಿ ನೀಡಬೇಕು. ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಬೇಕು. ಪ್ರತಿಷ್ಠಿತ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಸೀಟುಗಳನ್ನು ಕೊಡಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ಸದಸ್ಯ ನಂಜಪ್ಪ ಬಸವನಗುಡಿ ಮಾತನಾಡಿ, ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌರಕಾರ್ಮಿಕರಿಗೆ ಸರ್ಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದು, ಅವರಿಗೆ ಹಕ್ಕು ಪತ್ರಗಳನ್ನು ನೀಡಬೇಕು. ಸಫಾಯಿ ಕರ್ಮಚಾರಿ, ಆದಿ ದ್ರಾವಿಡ ಸಮುದಾಯಕ್ಕೆ ಸರ್ಕಾರ ಗುರುತಿಸಿ ಮೀಸಲಿರಿಸಿದ್ದ ಹೆಬ್ಬಾಳು ಕಾಲೋನಿಯ ಸರ್ವೇ ನಂ.141ರ ಎರಡು ಎಕರೆ ಜಾಗವನ್ನು ಆಶ್ರಯ ಸಮಿತಿಗೆ ಸೇರಿಸಿರುವುದನ್ನು ಹಿಂಪಡೆದು ಸಫಾಯಿ ಕರ್ಮಚಾರಿ, ಆದಿ ದ್ರಾವಿಡ ಸಮುದಾಯಕ್ಕೆ ಕೊಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಮಾಲತಿ. ಡಿಡಿಪಿಐ ರಾಮಚಂದ್ರರಾಜೇ ಅರಸ್ ಹಾಗೂ ಇತರರು ಇದ್ದರು.