

ತಿಪಟೂರು: ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಅವಸಾನದ ಅಂಚಿನಲ್ಲಿರುವ ಪೌಂಡಿಮನೆ (ದೊಡ್ಡಿ) ರಕ್ಷಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಹಿಂದಿನ ದಿನಗಳಲ್ಲಿ ಬಹುತೇಕ ಎಲ್ಲ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಬೀಡಾಡಿ ದನಗಳು, ಸಾಕು ಪ್ರಾಣಿಗಳು, ಕುರಿ, ಮೇಕೆಗಳು ರೈತರ ಜಮೀನುಗಳಿಗೆ ನುಗ್ಗಿ ಪೈರು/ಬೆಳೆ ತಿಂದು ನಷ್ಟ ಉಂಟುಮಾಡಿದರೆ ಜಮೀನಿನ ಮಾಲೀಕ ಅವುಗಳನ್ನು ಹಿಡಿದು ಮಂಡಲ ಪಂಚಾಯಿತಿ/ ಗ್ರಾಪಂ ಅಥವಾ ನಗರ ಪ್ರದೇಶದಲ್ಲಿ ಪುರಸಭೆಯ ಅಧೀನದಲ್ಲಿದ್ದ ಪೌಂಡಿಮನೆಗೆ ಬಿಡುತ್ತಿದ್ದರು.
ಜಾನುವಾರು ಮಾಲೀಕರಿಂದ ಇಂತಿಷ್ಟು ಎಂದು ದಂಡ ಕಟ್ಟಿಸಿಕೊಂಡು ಜಾನುವಾರು ಬಿಟ್ಟು ಕಳಿಸುವ ಪದ್ಧತಿ ಇತ್ತು ಮತ್ತು ದಂಡದ ರೂಪದಲ್ಲಿ ಕಟ್ಟಿಸಿಕೊಂಡ ಹಣದ ಸ್ವಲ್ಪ ಭಾಗವನ್ನು ಜಮೀನಿನ ಮಾಲಿಕನಿಗೆ ಬೆಳೆ ನಷ್ಟ ಪರಿಹಾರದ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ, ಕಾಲ ಬದಲಾದಂತೆ ಪೂರ್ವಜರು ಮುಂದಾಲೋಚನೆಯಿಂದ ನಿರ್ಮಿಸಿದ್ದ ಇಂತಹ ಪೌಂಡಿಮನೆಗಳು ನೇಪಥ್ಯಕ್ಕೆ ಸರಿದಿವೆ. ಹಿಂದೆ ನಗರದ ಕೋಟೆ ಬಡಾವಣೆಯಲ್ಲಿ ಇದೇ ಉದ್ದೇಶದಿಂದ ನಿರ್ಮಿಸಿದ್ದ ಪೌಂಡಿಮನೆ ಈಗ ಪೌರ ಕಾರ್ಮಿಕರ
ಉಪಾಹಾರ ಗೃಹವಾಗಿ ಮಾರ್ಪಟ್ಟಿದೆ. ಆದರೆ ಈಗಲೂ ಈ ರಸ್ತೆಯನ್ನು ಪೌಂಡಿರಸ್ತೆ ಎಂದೇ ಕರೆಯಲಾಗುತ್ತಿದೆ.
ಇನ್ನು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಪೂರ್ವಜರು ನಿರ್ಮಿಸಿದ್ದ ಪೌಂಡಿಮನೆ ಬಹುತೇಕ ನೆಲಸಮವಾಗಿದ್ದು, ಇದರ ಕುರುಹು ನಶಿಸುವುದಕ್ಕೂ ಮುಂಚೆ ಮತ್ತು ಆ ಜಾಗದ ಮೇಲೆ ಭೂಗಳ್ಳರ ಕಣ್ಣು ಬೀಳುವುದಕ್ಕೂ ಮುಂಚೆ ಪುರಾತನ ಪೌಂಡಿಮನೆ ರಕ್ಷಣೆ ಆಗಬೇಕು ಮತ್ತು ಇದರ ಉದ್ದೇಶ ಮುಂದಿನ ಪೀಳಿಗೆಗೆ ತಿಳಿಯುವಂತಾಗಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.
ಕೃಷಿ ಸ್ನೇಹಿ: ತಾಲೂಕು ಪಶು ಇಲಾಖೆಯ ಈಗಿನ ದಾಖಲೆಗಳಲ್ಲಿ ಇಂತಹ ಯಾವುದೇ ಪೌಂಡಿಮನೆಗಳು ಇರುವ ಬಗ್ಗೆ ಮಾಹಿತಿ ಇಲ್ಲ. ತಾಲೂಕಿನ ನೊಣವಿನಕೆರೆ ಮತ್ತು ರಂಗಾಪುರದಲ್ಲಿ ಖಾಸಗಿಯಾಗಿ ನಿರ್ವಹಿಸಲ್ಪಡುತ್ತಿರುವ ಒಟ್ಟು ಎರಡು ಗೋಶಾಲೆ ಇದೆ. ಸರ್ಕಾರದ ನಿಯಮಾವಳಿ ಅನುಸಾರ ಪ್ರತಿ ರಾಸಿನ ಆರೈಕೆಗೆ 17.50 ರೂ. ನಿಗದಿಯಾಗಿದೆ. ಆದರೆ ಮಹಿಳೆಯರಿಗೆ ಗೃಹಲಕ್ಷಿ$್ಮ ಗ್ಯಾರಂಟಿಯ ಹಣ ಬರುವ ರೀತಿ ಯಾವಾಗಲೋ ಒಮ್ಮೆ ಅನುದಾನದ ಹಣ ಬಿಡುಗಡೆಯಾಗುತ್ತದೆ ಎನ್ನಲಾಗಿದೆ. ಇನ್ನು ಸರ್ಕಾರಿ ಅನುದಾನದ ಜತೆ ಎನ್ಜಿಒ ಸಂಸ್ಥೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಒಂದು ಗೋಶಾಲೆ ನಿರ್ವಹಿಸುತ್ತಿದೆ. ಜಿಲ್ಲೆಯ ಶಿರಾ ತಾಲೂಕಿನಲ್ಲಿರುವ ಒಂದು ಗೋಶಾಲೆ ಮಾತ್ರ ಸರ್ಕಾರಿ ನಿಯಂತ್ರಣದಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ನಾಯಿಗಳ ನಿರ್ವಹಣೆಗೆ ಸ್ಥಳಾವಕಾಶದ ಕೊರತೆ ಕಾರಣ ನೀಡಿ ಇಲಾಖೆಗಳು ಕೈ ತೊಳೆದುಕೊಳ್ಳುತ್ತಿವೆ. ಪೂರ್ವಜರು ಮುಂದಾಲೋಚನೆಯಿಂದ ನಿರ್ಮಿಸಿದ್ದ ಪೌಂಡಿಮನೆಗಳು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಪೈರುಗಳ ನಾಶ ತಪ್ಪಿಸಿ, ಕೃಷಿಸ್ನೇಹಿ ಎನ್ನಿಸಿದ್ದವು. ಹಿಂದೆ ಜಾರಿಯಲ್ಲಿದ್ದ ಈ ರೀತಿಯ ಪದ್ಧತಿ ಮತ್ತು ಕೃಷಿ ಪರಂಪರೆ ಮುಂದಿನ ಪೀಳಿಗೆಗೆ ಕುರುಹಾಗಿ ಉಳಿಸುವ ಸಲುವಾಗಿ ನೇಪತ್ಯಕ್ಕೆ ಸರಿದಿರುವ ಹಾಲ್ಕುರಿಕೆಯ ಪೌಂಡಿಮನೆಯ ರಕ್ಷಣೆ ಅಗತ್ಯವಿದೆ.
| ಎಂ.ಬಿ.ಪರಮಶಿವಯ್ಯ ತಾಪಂ ಮಾಜಿ ಅಧ್ಯಕ್ಷ ಮಾಗೇನಹಳ್ಳಿ, ಹಾಲ್ಕುರಿಕೆ