ಪೋಷಕಾಂಶಯುಕ್ತ ಆಹಾರ ಬಳಕೆ ರೂಢಿಸಿಕೊಳ್ಳಿ:ಪ್ರೊ.ಎನ್.ಕೆ.ಲೀಲಾವತಿ ಸಲಹೆ

ಪೋಷಕಾಂಶಯುಕ್ತ ಆಹಾರ ಬಳಕೆ ರೂಢಿಸಿಕೊಳ್ಳಿ:ಪ್ರೊ.ಎನ್.ಕೆ.ಲೀಲಾವತಿ ಸಲಹೆ
Published on

ಹಾಸನ: ನಮ್ಮ ಆಹಾರವೇ ನಮ್ಮ ಭವಿಷ್ಯ, ಈ ನಿಟ್ಟಿನಲ್ಲಿ ಯುವ ಜನತೆ ಜಾಗೃತಿ ವಹಿಸಬೇಕೆಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ಕೆ.ಲೀಲಾವತಿ ಸಲಹೆ ನೀಡಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ತುತ್ತು ಆಹಾರವು ರೈತರ ಬೆವರಿನ ಫಲ. ಈ ನಿಟ್ಟಿನಲ್ಲಿ ಅಗತ್ಯವಿದ್ದಷ್ಟು, ಆಹಾರವನ್ನ ಮಾತ್ರ ಬಳಸಬೇಕು. ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಪೋಷಕಾಂಶಯುಕ್ತ ಆಹಾರ ಬಳಕೆ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಂಕ್‌ಫುಡ್ ಸಂಸ್ಕೃತಿ ಒಳ್ಳೆಯದಲ್ಲ, ಅದು ತಾತ್ಕಾಲಿಕವಷ್ಟೇ, ಮದುವೆ, ಶುಭಸಮಾರಂಭ ಸೇರಿ ಸಾಮಾಹಿಕ ಭೋಜನ ಕಾರ್ಯಕ್ರಮಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಕಾಲೇಜು ವತಿಯಿಂದ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಫಕೀರಮ್ಮ ಪಿ.ಮುರಗೋಡ ಮಾತನಾಡಿ, ಹೆಚ್ಚಿನ ಆಹಾರ ಪದಾರ್ಥಗಳು ಔಷಧಿಯ ಗುಣಹೊಂದಿದ್ದು, ಮಧುಮೇಹ, ರಕ್ತದೊತ್ತಡ, ದೃಷ್ಟಿ ದೋಷ ಸೇರಿ ಹಲವು ಕಾಯಿಲೆಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.

ಭರ್ಜರಿ ವ್ಯಾಪಾರ :

ಇದೇ ವೇಳೆ ಕಾಲೇಜಿನ ಆವರಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸುಮಾರು ಇಪ್ಪತ್ತು ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಪೋಷಕಾಂಶಯುಕ್ತ ವಿವಿಧ ಬಗೆಯ ಲಸ್ಸಿಗಳು, ಮಿಲ್ಕ್ ಶೇಕ್, ತಂಪು ಪಾನೀಯ ತಯಾರಿಸಿ ಮಾರಾಟ ಮಾಡುವ ಮೂಲಕ ಅರಿವು ಮೂಡಿಸಿದರು. ಕಾಲೇಜಿನ ಹೆಚ್ಚು ವಿದ್ಯಾರ್ಥಿಗಳು ಹೊಸ ಬಗೆಯ ವರ್ಣರಂಜಿತ ಜ್ಯೂಸ್‌ಗಳನ್ನು ಸವಿಯುವುದರೊಂದಿಗೆ ಮಾಹಿತಿ ಪಡೆದುಕೊಂಡರು. ಸಾರ್ವಜನಿಕರು ವ್ಯಾಪಾರ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

ಜಾಗೃತಿ ಜಾಥಾ:

ಕಾರ್ಯಕ್ರಮಕ್ಕೂ ಮುನ್ನ ನಡೆದ ಜಾಗೃತಿ ಜಾಥಾಗೆ ಪ್ರಾಂಶುಪಾಲರಾದ ಪ್ರೊ.ಎನ್.ಕೆ.ಲೀಲಾವತಿ ಚಾಲನೆ ನೀಡಿದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು, ಆಹಾರ ಮತ್ತು ಪೋಷಕಾಂಶ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮುಡಿಸಿದರು. ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಧುಮತಿ, ಪ್ರೊ.ಶಿವಮೂರ್ತಿ, ಪುಟ್ಟರತ್ನಮ್ಮ, ವಾಣಿಜ್ಯ ವಿಭಾಗದ ರಘು, ಸ್ಪೂರ್ತಿ, ಕಾವ್ಯ, ಗ್ರಂಥಪಾಲಕರಾದ ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net