ಪೋಷಕರಿಗೆ, ಗುರುಗಳಿಗೆ ಹೆಸರು ತರುವ ರೀತಿ ಬದಕಬೇಕು: ಹಾಸನ ವಿವಿ ಕುಲಸಚಿವ ಬಿ.ಎ. ಜಗದೀಶ್

09_HSN_03
Published on

ಹಾಸನ: ವಿದ್ಯಾರ್ಥಿಗಳ ಪೋಷಕರಿಗೆ ಮತ್ತು ತಾವು ಕಲಿತ ವಿದ್ಯಾಸಂಸ್ಥೆಗೆ ಹಾಗೂ ಗುರುಗಳಿಗೆ ಹೆಸರು ತರುವ ರೀತಿಯಲ್ಲಿ ಬದುಕಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವೆಲ್ಲರೂ ಇದ್ದು ಅದನ್ನು ಧೈರ್ಯದಿಂದ ಎದುರಿಸಬೇಕು ಎಂದು ಹಾಸನ ವಿಶ್ವವಿದ್ಯಾನಿಲಯದ ಕುಲಸಚಿವ ಬಿ.ಎ. ಜಗದೀಶ್ ಕರೆ ನೀಡಿದರು.

ನಗರದ ಬಿ.ಕಾಟೀಹಳ್ಳಿಯಲ್ಲಿರುವ ಕುವೆಂಪು ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಕುವೆಂಪು ಜನಪದೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀವು ನಿಮ್ಮನ್ನು ಪ್ರೀತಿಸಿದಂತೆ ದೇಶವನ್ನು ಪ್ರೀತಿಸಬೇಕು. ದೇಶಾಭಿಮಾನ ಬೆಳೆಸಿಕೊಂಡು ದೇಶಕ್ಕೆ ಏನಾದರೂ ಕೊಡುಗೆ ನೀಡುವ ಕೆಲಸ ಮಾಡಿದರೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಬಿ.ಈ. ಶಿವರಾಮೇಗೌಡ ಮಾತನಾಡಿ, ಎಲ್ಲ ಸಂಸ್ಕೃತಿಗೆ ಮೂಲ ಬೇರು ಜನಪದ. ನಮ್ಮ ಹಿರಿಯರು ಅನಕ್ಷರಸ್ಥರಾಗಿದ್ದರೂ ಕೂಡ ತಮ್ಮ ಜ್ಞಾನ ಹಾಗೂ ತಿಳಿವಳಿಕೆಯಿಂದ ನಮ್ಮ ಪರಂಪರೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಈ ತಲೆಮಾರಿಗೂ ಕೊಂಡೊಯ್ದಿರುವುದು ನಮಗೆ ತಿಳಿದಿದೆ. ಕುವೆಂಪು ಅವರ ರಾಮಾಯಣ ದರ್ಶನಂ, ಮಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಅಲ್ಲಿಯ ಜನರ ಉಡುಗೆ, ತೊಡುಗೆ ಸಂಸ್ಕೃತಿಯನ್ನು ಚಿತ್ರಿಸಿದ್ದಾರೆ. ನಮ್ಮ ಜನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ಹರೀಶ್, ಕುವೆಂಪು ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಎಚ್.ಬಿ ವಿನುತಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಪ್ರಶಾಂತಕುಮಾರ, ಸಹ ಪ್ರಾಧ್ಯಾಪಕರಾದ ಕಾವ್ಯಾ, ಎಸ್.ವಿ. ರೇಖಾ, ಶ್ರೀನಿವಾಸ, ಎಸ್.ಎಸ್. ದಿಲೀಪ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net