ಪೋಳ್ಯದಲ್ಲಿ ಸೌಲಭ್ಯ ವಂಚಿತ ಕುಟುಂಬ

mane
Published on

ಶ್ರವಣ್ ಕುಮಾರ್ ನಾಳ ಪುತ್ತೂರು
ಆಗಲೋ ಈಗಲೋ ಬೀಳುವಂತಿರುವ ಮಣ್ಣಿನ ಗೋಡೆ, ವಿದ್ಯುತ್ ಸಂಪರ್ಕವೇ ಇಲ್ಲದ ಮನೆ, ದೇಹಬಾಧೆ ತೀರಿಸಲು ಶೌಚಗೃಹವೂ ಇಲ್ಲದ ಸ್ಥಿತಿ.. ರಸ್ತೆ ಸೌಕರ್ಯವಿಲ್ಲದೆ ಒಂದೂವರೆ ಕಿ.ಮೀ. ನಡೆದುಕೊಂಡೇ ಸಾಗಬೇಕು... ಇದು ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿನ ಸೌಲಭ್ಯ ವಂಚಿತ ಕುಟುಂಬವೊದರ ಚಿತ್ರಣ.

ಪತಿ ನಾರಾಯಣ ನಾಯ್ಕ, ಪತ್ನಿ ಹರಿಣಾಕ್ಷಿ ಮತ್ತು ಪುತ್ರಿ ಪ್ರತಿಜ್ಞಾ ಅವರನ್ನು ಒಳಗೊಂಡಿರುವ ಬಡ ಕುಟುಂಬಕ್ಕೆ ಕೂಲಿ ಕೆಲಸವೇ ಜೀವನಾಧಾರ. ತಂದೆ-ತಾಯಿ ಕೂಲಿ ಕೆಲಸ ಮಾಡಿ ಸಂಪಾದಿಸಿದರೆ ಹೊಟ್ಟೆ ತುಂಬಿಸಬಹುದು. ನಿತ್ಯದ ದುಡಿಮೆಯಲ್ಲಿ ಒಂದಿಷ್ಟು ಉಳಿತಾಯ ಮಾಡಿ ಮಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ತರಗತಿಯಲ್ಲಿರುವ ಪ್ರತಿಜ್ಞಾಗೆ ಆನ್‌ಲೈನ್ ಮೂಲಕ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ. ಆದರೆ ಮನೆಗೆ ವಿದ್ಯುತ್ತೇ ಇಲ್ಲದಿದ್ದರೆ ಮೊಬೈಲ್ ಚಾರ್ಜ್ ಮಾಡುವುದಾದರೂ ಹೇಗೆ?

ಫೆ.22ರಂದು ರಾತ್ರಿ ಭಾರಿ ಮಳೆಗೆ ಈ ಬಡ ಕುಟುಂಬದ ಮನೆಯ ಮೇಲೆ ಮರ ಅಪ್ಪಳಿಸಿತ್ತು. ಆಗ ತಾಯಿ, ಮಗಳು ಅಪಾಯದಿಂದ ಪಾರಾಗಿದ್ದರು. ಇದಾದ ಬಳಿಕ ಪಂಚಾಯಿತಿ ಅಧಿಕಾರಿಗಳು ಪರಿಶೀಲಿಸಿ ಹೋಗಿದ್ದರೂ ಈ ತನಕ ಪತ್ತೆಯಿಲ್ಲ. ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ದೊರಕುವುದೆಂಬ ನಿರೀಕ್ಷೆಯಲ್ಲಿ ಕಾಯುತ್ತಲೇ ಇದ್ದಾರೆ.

ಸದ್ಯ ಬಾಡಿಗೆ ಮನೆಯಲ್ಲಿ ವಾಸ: ಮರ ಬಿದ್ದು ಮನೆ ಹಾನಿಗೊಳಗಾದ ಬಳಿಕ ಈ ಕುಟುಂಬ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. ಇದರ ಮಧ್ಯೆ ಕರೊನಾದಿಂದ ಕೆಲಸವೂ ಇಲ್ಲದಂತಾಗಿದೆ. ಮನೆ ಬಾಡಿಗೆಯನ್ನೂ ಕಟ್ಟಲಾಗದ ಪರಿಸ್ಥಿತಿ. ಅತ್ತ ಮನೆಯೂ ದುರಸ್ತಿಯಾಗದೆ, ಇತ್ತ ಕೆಲಸವೂ ಇಲ್ಲದೆ ಕುಟುಂಬ ಕಂಗಾಲಾಗಿದೆ. ಸಂಘಟನೆಯೊಂದರ ಪ್ರಮುಖರು ಈ ಕುಟುಂಬದ ನರಕಯಾತನೆ ಕಂಡು ಜಿಲ್ಲಾಧಿಕಾರಿ, ಎಸ್ಪಿಯವರಿಗೆ ಮಾಹಿತಿ ನೀಡಿದ್ದರು. ಎಸ್ಪಿ ತಕ್ಷಣವೇ ಪುತ್ತೂರು ನಗರ ಠಾಣೆ ಎಸ್‌ಐ ಜಂಬೂರಾಜ್ ಮಹಾಜನ್ ಅವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಮನೆ ರಿಪೇರಿಗಾಗಿ ಸರ್ಕಾರದ ಸಹಾಯದ ನಿರೀಕ್ಷೆಯಲ್ಲೇ ಕುಟುಂಬ ದಿನಗಳೆಯುತ್ತಿದೆ. ವಾರದೊಳಗೆ ಪರಿಹಾರ ದೊರಕದಿದ್ದರೆ ಪ್ರತಿಭಟನೆ ನಡೆಸಲಾಗುವುದೆಂದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಗಿರಿಧರ್ ನಾಯ್ಕ ಎಚ್ಚರಿಸಿದ್ದಾರೆ.

ನಾವು ಕೂಲಿ ಮಾಡಿಕೊಂಡು ಗೌರವಯುತ ಬದುಕು ಸಾಗಿಸುತ್ತಿದ್ದೇವೆ. ಆದರೆ ಜನನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ನಮ್ಮ ಮನೆ ಮಳೆಯಿಂದ ಹಾನಿಗೊಳಗಾಗಿದ್ದರೂ ಪರಿಹಾರ ದೊರಕಿಸಿಕೊಡುವವರಿಲ್ಲ. ಕರೊನಾದಿಂದ ಕೆಲಸವೂ ಇಲ್ಲದೆ ಸಂಕಷ್ಟದ ಬದುಕು ನಮ್ಮದಾಗಿದೆ.
ಹರಿಣಾಕ್ಷಿ ನೊಂದ ಮಹಿಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net