ಪೋಕ್ಸೋ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ

Published on

ತುಮಕೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲತಾಯಿ ಸೇರಿ ಮೂವರಿಗೆ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ಎಫ್​ಟಿಎಸ್​ಸಿ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿ ಅರುಣ್​ ಕುಮಾರ್​ಗೆ ಶಿಕ್ಷೆ ಜತೆಗೆ 1.50 ಲಕ್ಷ ರೂ. ದಂಡ ವಿಧಿಸಿದೆ. ಅಜ್ಜಿ ಗಂಗಮ್ಮ ಹಾಗೂ ಮಲತಾಯಿ ರತ್ನಮ್ಮಗೂ ತಲಾ 1 ಲಕ್ಷ ರೂ. ದಂಡ ಸಹಿತ ಶಿಕ್ಷೆ ನೀಡಿದೆ. ಅಪ್ರಾಪ್ತೆಗೆ ಕಾನೂನು ಸೇವಾ ಪ್ರಾಧಿಕಾರದ ಪರಿಹಾರ ಸೇರಿ 13.50 ಲಕ್ಷ ಸಾವಿರ ರೂ. ನೀಡುವಂತೆ ಆದೇಶಿಸಿದೆ. ಮೊದಲ ಪತ್ನಿಗೆ ಐವರು ಹೆಣ್ಣು ಮಕ್ಕಳು ಅನ್ನೋ ಕಾರಣಕ್ಕೆ ಪತಿ ಮತ್ತೊಂದು ಮದುವೆಯಾಗಿದ್ದನು. ಆದರೆ, ಎರಡನೇ ಪತ್ನಿಗೆ ಮಕ್ಕಳಾಗಿರಲಿಲ್ಲ. ಈ ಹೊಟ್ಟೆಕಿಚ್ಚಿನಿಂದ ಮಲತಾಯಿ ರತ್ನಮ್ಮ ಹಾಗೂ ಅಜ್ಜಿ ಗಂಗಮ್ಮ ಸಂತ್ರಸ್ತೆಯನ್ನು ಕೂಲಿ ಕೆಲಸಕ್ಕೆ ಕರೆದೊಯ್ದಿದ್ದರು. ಬಳಿಕ, ಶೆಡ್​ನಲ್ಲಿ ಕೂಡಿ ಹಾಕಿ ಅಪರಾಧಿ ಅರುಣ್​ ಕುಮಾರ್​ ಮೂರು ನಾಲ್ಕು ತಿಂಗಳು ಕಾಲ ಲೈಂಗಿಕ ದೌರ್ಜನ್ಯ ಎಸಗಲು ಅವಕಾಶ ಮಾಡಿಕೊಟ್ಟಿದ್ದರು. ಪ್ರಕರಣ ಪಾವಗಡ ಠಾಣೆಯಲ್ಲಿ ದಾಖಲಾಗಿತ್ತು. ಸರ್ಕಾರದ ಪರವಾಗಿ ಕೆ.ಎಸ್​.ಆಶಾ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net