ಪೋಕ್ಸೋ ಪ್ರಕರಣ ತಡೆಗೆ ಸಮಗ್ರ ಯೋಜನೆ

CTD NEWS DC MEETING...
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವ ಜತೆಗೆ ಹಳ್ಳಿ, ಗ್ರಾಪಂ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಜಾರಿ ತಂಡಗಳನ್ನು ರಚಿಸುವಂತೆೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಬಾಲ್ಯವಿವಾಹ, ಪೋಕ್ಸೋ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ನಿಟ್ಟಿನಲ್ಲಿ ಡಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪೋಕ್ಸೋ, ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ ಎಂದರು.

ಇವುಗಳ ತಡೆಗೆ ಮತದಾನ ಜಾಗೃತಿ ಮಾದರಿ ಪ್ರತಿ ಮನೆ, ಮನೆಗಳಿಗೂ ತೆರಳಿ ವ್ಯಾಪಕವಾಗಿ ತಿಳಿವಳಿಕೆ ಮೂಡಿಸಬೇಕು. ಪ್ರತಿ ಹಳ್ಳಿಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾಮ ಸಹಾಯಕ, ಆರ್‌ಡಿಪಿಆರ್ ಸಿಬ್ಬಂದಿ, ಬೀಟ್‌ಪೊಲೀಸ್, ಮುಖ್ಯ ಶಿಕ್ಷಕ ಹಾಗೂ ಹಾಸ್ಟೆಲ್ ವಾರ್ಡನ್‌ಗಳ ನೇತೃತ್ವದಲ್ಲಿ ಜಾರಿ ತಂಡಗಳನ್ನು ರಚಿಸಬೇಕು. ಈ ತಂಡಗಳು ಪ್ರತಿ ಮನೆ, ಮನೆಗೆ ತೆರಳಿ ಪೋಕ್ಸೋ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸುವುದರೊಂದಿಗೆ ಮಾಹಿತಿ ಸಂಗ್ರಹಿಸಬೇಕು ಎಂದರು.

ಈ ತಂಡಗಳ ಮೇಲುಸ್ತುವಾರಿಗೆ ಪಿಡಿಒ, ಆರ್‌ಐ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ವಾರ್ಡನ್, ಸಬ್‌ಇನ್ಸ್‌ಪೆಕ್ಟರ್, ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿ ಹಾಗೂ ಅಂಗನವಾಡಿ ಮೇಲ್ವಿಚಾರಕರ ನೇತೃತ್ವದಲ್ಲಿ 2ನೇ ಹಂತದ ಜಾರಿ ತಂಡ ರಚಿಸಬೇಕು. ಈ ತಂಡ ಹಳ್ಳಿಗಳ ಜಾರಿ ತಂಡದಿಂದ ಪ್ರತಿದಿನ ಮಾಹಿತಿ ಪಡೆದು ವಾರಕೊಮ್ಮೆ ಸಭೆ ನಡೆಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ನೇತೃತ್ವದಲ್ಲಿ ಜಾರಿ ತಂಡ ರಚಿಸಬೇಕು. ಇದರಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಇರಬೇಕು. ಪ್ರತಿ ತಾಲೂಕಿಗೂ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು ಎಂದರು.

ತಾಲೂಕು ಹಂತದ ತಂಡ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು. ಜಿಲ್ಲಾ ಮಟ್ಟದಲ್ಲಿ ತಮ್ಮ ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಕೋರ್ ಕಮಿಟಿ ರಚಿಸಬೇಕು. ಈ ಸಮಿತಿ 30 ದಿನಗಳಿಗೊಮ್ಮೆ ಪರಿಶೀಲನೆ ಸಭೆ ನಡೆಸಬೇಕಿದೆ ಎಂದು ಹೇಳಿದರು.

ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿವೆ. ಜಿಲ್ಲಾ ಪೊಲೀಸ್‌ನಿಂದ CAP-SECUR ( Comprehensive Approach to Prevent- Sexual Explotation, Child-marriages & to Uplift the Right of-Children) ವಿನೂತನ ಕಾರ‌್ಯಕ್ರಮ ಜಾರಿಗೊಳಿಸಲಾಗುತ್ತದೆ. ಮಕ್ಕಳನ್ನು ಲೈಂಗಿಕ ಶೋಷಣೆ ಹಾಗೂ ಬಲವಂತದ ಮದುವೆಯಿಂದ ಪಾರು ಮಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಗುರಿ ಹೊಂದಲಾಗಿದೆ ಎಂದರು.

ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 93,2023-24ನೇ ಸಾಲಿನಲ್ಲಿ 131, 2024-25ನೇ ಸಾಲಿನಲ್ಲಿ 150 ಹಾಗೂ 2025-26ನೇ ಸಾಲಿನಲ್ಲಿ ಪ್ರಸ್ತುತ 21 ಪೋಕ್ಸೋ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಬಾಲ್ಯವಿವಾಹ, ಬಾಲಕಾರ್ಮಿಕ ಹಾಗೂ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಡಿಪಿಐ ಎಂ.ಆರ್.ಮಂಜುನಾಥ್ ಹೇಳಿದರು.

ಎಡಿಸಿ ಬಿ.ಟಿ.ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ.ದಿನಕರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಆರ್.ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಇತರರಿದ್ದರು.

ಕೋಟ್

ಜಿಲ್ಲೆಯಲ್ಲಿ ದಾಖಲಾದ ಈವರೆಗಿನ ಪೋಕ್ಸೋ ಪ್ರಕರಣಗಳಲ್ಲಿ 18 ತುಂಬಿದ ಹಾಗೂ 30 ವರ್ಷದ ಒಳಗಿನ ಆರೋಪಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪೋಕ್ಸೋ, ಬಾಲ್ಯ ವಿವಾಹ ಪ್ರಕರಣಗಳು ವರದಿಯಾದರೆ ಆಶಾ ಕಾರ‌್ಯಕರ್ತೆಯರು, ಬೀಟ್‌ಪೊಲೀಸರು, ಕ್ಷೇತ್ರ ಮಟ್ಟದ ಅಧಿಕಾರಿಗಳು ಪ್ರಕರಣದ ವರದಿಯನ್ನು ಡಿಸಿಗೆ ಸಲ್ಲಿಸಬೇಕಾಗುತ್ತದೆ.

ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ ಚಿತ್ರದುರ್ಗ

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net