ಪೋಕ್ಸೋ ಕಾಯ್ದೆಯಡಿ ಇಬ್ಬರಿಗೆ ಹತ್ತು ವರ್ಷ ಜೈಲು ಶಿಕ್ಷೆ

pocso act
Published on

ಚಿಕ್ಕಮಗಳೂರು: ಬಾಲಕಿಯನ್ನು ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರ ನಡೆಸಿ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳಿಗೆ ಚಿಕ್ಕಮಗಳೂರಿನ ಪೋಕ್ಸೋ ನ್ಯಾಯಾಲಯ ತಲಾ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಮೊದಲ ಆರೋಪಿಗೆ ೪೧ ಸಾವಿರ ರೂ. ಹಾಗೂ ಎರಡನೇ ಆರೋಪಿಗೆ ೧೧ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಕಡೂರು ತಾಲೂಕು ಚಿಕ್ಕಂಗಳ ಗ್ರಾಮದ ಕಿರಣ ನಾಯ್ಕ ಹಾಗೂ ಅಭಿಷೇಕ ನಾಯ್ಕ ಶಿಕ್ಷೆಗೆ ಗುರಿಯಾದವರು. ಕಿರಣ ನಾಯ್ಕ ಎರಡನೇ ಆರೋಪಿಯಾದ ಅಭಿಷೇಕ ನಾಯ್ಕ ಸಹಾಯದಿಂದ ಅಪ್ರಾಪ್ತೆಯನ್ನು ಕಡೂರು ಲಾಡ್ಜ್ಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದರು. ವಿಷಯ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿರುವ ಬಗ್ಗೆ ನೊಂದ ಬಾಲಕಿ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿ ಚಿಕ್ಕಮಗಳೂರು ಫೋಕ್ಸೋ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಅಂದು ಕಡೂರು ವೃತ್ತ ನಿರೀಕ್ಷಕರಾಗಿದ್ದ ಕೆ.ಆರ್.ಶಿವಕುಮಾರ್ ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡಿದ್ದರು. ಬಳಿಕ ಪ್ರಭಾರ ವೃತ್ತ ನಿರೀಕ್ಷಕರಾಗಿದ್ದ ಶ್ರೀಕಾಂತ್ ಆರೋಪಿತರ ವಿರುದ್ಧ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೊದಲ ಆರೋಪಿ ಕಿರಣ ನಾಯ್ಕನಿಗೆ ಹತ್ತು ವರ್ಷ ಜೈಲು ಹಾಗೂ ೪೧ ಸಾವಿರ ರೂ. ದಂಡ ಮತ್ತು ಎರಡನೇ ಆರೋಪಿ ಅಭಿಷೇಕ ನಾಯ್ಕನಿಗೆ ೧೦ ವರ್ಷ ಜೈಲು ಹಾಗೂ ೧೧ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇದಲ್ಲದೆ ನೊಂದ ಬಾಲಕಿಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಭರತ್ ಕುಮಾರ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net