ಪೋಕ್ಸೋ ಕಾಯ್ದೆ ಅರಿವು ಅಗತ್ಯ

bt-27-1
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ಸಹಾಯವಾಣ ಸಲಹಾ ಮಂಡಳಿ-೧೦೯೮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ವೀಣಾ ಕುಂಬಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರೋಗ್ರಾಮ್ ಆಫಿಸರ್ ಅಮರೇಶ ಹಿರೇಮಠ ಇತರರು ಇದ್ದರು.
Published on

ಬಾಗಲಕೋಟೆ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜೂನ ಮಾಹೆಯವರೆಗೆ ಜಿಲ್ಲೆಯಲ್ಲಿ ೬೪ ಪ್ರಕರಣಗಳು ದಾಖಲಾಗಿ ಕೇವಲ ೧ ಪ್ರಕರಣಕ್ಕೆ ಮಾತ್ರ ಶಿಕ್ಷೆಯಾಗಿರುವುದರಿಂದ ಪೋಕ್ಸೋ ಕಾಯ್ದೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ಸಹಾಯವಾಣ ಸಲಹಾ ಮಂಡಳಿ-೧೦೯೮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪಾಲಕರು, ಸಮುದಾಯದವರು ಪರಸ್ಪರ ರಾಜಿ ಸಂದಾನದಲ್ಲೇ ಮುಗಿಸಿಕೊಳ್ಳುತ್ತಿರುವುದು ವಿ಼ಷಾದನೀಯ ಎಂದರು.

ಪೋಕ್ಸೋ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದಾಗ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯಗಳನ್ನು ಕಡಿಮೆಗೊಳಿಸಬಹುದಾಗಿರುತ್ತದೆ. ಅಪರಾಧಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸಹಕಾರಿಯಾಗುವದರಿಂದ ಗ್ರಾಮೀಣ ಸಮುದಾಯಗಳಲ್ಲಿ ರೈಲು, ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಮಟ್ಟದ ಜನ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.

ದತ್ತು ತೆಗೆದುಕೊಂಡಂತಹ ದಂಪತಿಗಳು ಕೆಲವು ವರ್ಷ ಮಗುವನ್ನು ತಮ್ಮ ಹತ್ತಿರ ಇಟ್ಟುಕೊಂಡು ನಂತರ ನಮಗೆ ಈ ಮಗು ಬೇಡ ಎಂದು ಹೇಳಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮಗುವಿನ ಭವಿಷ್ಯದ ಹಿತದೃಷ್ಠಿಯಿಂದ ದತ್ತು ಪಡೆದಂತಹ ದಂಪತಿ, ಪೊಸಕರ ಹೆಸರಿಗೆ ಇರುವ ಆಸ್ತಿಯಲ್ಲಿ ಒಂದು ಬಾಗ ಆ ಮಗುವಿನ ಹೆಸರಿಗೆ ಬರುವಂತೆಹ ಕ್ರಮಗಳನ್ನು ಕೈಗೊಂಡಲ್ಲಿ ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸುವದಿಲ್ಲ ಮತ್ತು ಸಮಸ್ಯೆಗಳು ಕೂಡ ಉದ್ಬವಿಸುವದಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹಗಳನ್ನು ತಡೆಗಟ್ಟುವುದು ಕೂಡಾ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಶಾಲಾ ಮುಖ್ಯೋಪಾಧ್ಯಾಯರಿಗೆ, ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಬೇಕು, ಮಕ್ಕಳ ಪಾಲಕರು, ಪೋಷಕರು ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಹೆಚ್ಚಿನ ಮಟ್ಟದ ಜಾಗೃತಿ ಮೂಡಿಸುವುದು, ೧೮ ವರ್ಷದೊಳಗಿನ ಮಗುವಿಗೆ ಮದುವೆ ಮಾಡಿದಲ್ಲಿ ಅದಕ್ಕಿರುವ ಶಿಕ್ಷೆ ಮತ್ತು ಪರಿಣಾಮಗಳ ಬಗ್ಗೆ ಪ್ರಚಾರಪಡಿಸಿದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ವೀಣಾ ಕುಂಬಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರೋಗ್ರಾಮ್ ಆಫಿಸರ್ ಅಮರೇಶ ಹಿರೇಮಠ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net