

ದೊಡ್ಡಬಳ್ಳಾಪುರ: ಪೊಲೀಸ್ ಕಾನ್‌ಸ್ಟೆಬಲ್‌ಗಳ ಸಮವಸ್ತ್ರ ಧರಿಸಿ ತಾಲೂಕು ಕಚೇರಿಗೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಹಾಗೂ ಕಾರ್ಯಕರ್ತರು ನಗರದ ಗಂಗಾಧರಪುರ ಸ.ನಂ.111ರಲ್ಲಿ ತಾಲೂಕು ಕಚೇರಿ ಸಮೀಪದ ಪೊಲೀಸ್ ವಸತಿ ಗೃಹ ಇದ್ದ ಜಮೀನಿನ ಖಾತೆ ಖಾಸಗಿಯವರ ಹೆಸರಿನಲ್ಲಿದೆ. ಈ ಜಮೀನು ಪೊಲೀಸ್ ಇಲಾಖೆಗೆ ಖಾತೆ ಮಾಡಿಕೊಡುವ ಮೂಲಕ ಪೊಲೀಸ್ ಇಲಾಖೆಗೆ ಉಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಡಿ.ಎ.ದಿವಾಕರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಮಾತನಾಡಿ, ರಾಜ್ಯಾದ್ಯಂತ ಸಾರ್ವಜನಿಕರು ಹಾಗೂ ಸರ್ಕಾರಿ ಆಸ್ತಿಗಳು ಪರರ ಪಾಲಾಗುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೂ ಮುಂಚೆಯೇ ತಾಲೂಕು ಕಚೇರಿ ಸಮೀಪದ ಸ.ನಂ.111 ರಲ್ಲಿ ಇರುವ ಜಾಗದಲ್ಲಿ ಸುಮಾರು 70 ವರ್ಷಗಳ ಹಿಂದೆಯೇ ಪೊಲೀಸ್ ವಸತಿ ಗೃಹಗಳು ಇದ್ದವು. ಇತ್ತೀಚಿನ ದಿನಗಳಲ್ಲಿ ವಸತಿ ಗೃಹಗಳು ಶಿಥಿಲವಾಗಿದ್ದರಿಂದ ಕಟ್ಟಡಗಳನ್ನು ತೆರವು ಮಾಡಲಾಗಿದೆ ಎಂದರು. ಈ ಜಮೀನು ಸುಮಾರು ವರ್ಷಗಳಿಂದ ಬೇರೆಯವರ ಹೆಸರಿನಲ್ಲಿ ಖಾತೆ ಇದ್ದು ಇದುವರೆಗೂ ಪೊಲೀಸ್ ಇಲಾಖೆ ಹೆಸರಿಗೆ ಖಾತೆಯಾಗಿಲ್ಲ. ಸಮಾಜದಲ್ಲಿ ಯಾವುದೇ ಅಪರಾಧ ಕೃತ್ಯ ನಡೆದರೆ ಅಲ್ಲಿ ಪೊಲೀಸರು ಇರಬೇಕು. ಆದರೆ, ಪೊಲೀಸರ ವಸತಿಗೆ ಸರಿಯಾದ ನೆಲೆ ಇಲ್ಲದಾಗಿದೆ. ಪೊಲೀಸರು ಪ್ರತಿಭಟನೆ ಮಾಡುವುದಿಲ್ಲ ಎಂದು ಅವರಿಗೆ ನೀಡಬೇಕಾದ ಸೌಲಭ್ಯ ನೀಡದೆ ಕಡೆಗಣಿಸುತ್ತಿರುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ವಸತಿ ಗೃಹ ಇರುವ ಜಾಗವನ್ನು ಪೊಲೀಸ್ ಇಲಾಖೆ ಎಂದು ಖಾತೆ ಬದಲಾವಣೆ ಮಾಡಬೇಕು ಎಂದು ಉಪವಿಭಾಗಾಧಿಕಾರಿ, ತಹಸೀಲ್ದಾರ್, ಉಪ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಡಿ.ಎ.ದಿವಾಕರ್, ಕಂದಾಯ ಇಲಾಖೆಯಲ್ಲಿ ತಳ ಮಟ್ಟದಿಂದ ದಾಖಲೀಕರಣ ಪರಿಶೀಲನೆ ನಡೆಸಬೇಕಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.