

ಧಾರವಾಡ: ಕೆಲ ದಿನಗಳಿಂದ ಪೊಲೀಸರು ಹಾಗೂ ವಕೀಲರ ನಡುವೆ ಏರ್ಪಟ್ಟಿದ್ದ ಜಟಾಪಟಿಯನ್ನು ಸೌಹಾರ್ದಯುತ ಮಾತುಕತೆ ಮೂಲಕ ಶುಕ್ರವಾರ ಬಗೆಹರಿಸಲಾಗಿದೆ.
ವಕೀಲರ ಮೇಲೆ ಪೊಲೀಸರ ದೌರ್ಜನ್ಯ ವಿರೋಧಿಸಿ ಹಾಗೂ ಆರೋಪಿತ ಪೊಲೀಸ್ ಅಧಿಕಾರಿ ಬಂಧನಕ್ಕೆ ಆಗ್ರಹಿಸಿ ವಕೀಲರ ಸಂಘದ ವತಿಯಿಂದ ಇಲ್ಲಿನ ಉಪನಗರ ಪೊಲೀಸ್ ಠಾಣೆ ಎದುರು ಶುಕ್ರವಾರ ಕೆಲ ಹೊತ್ತು ಪ್ರತಿಭಟನೆ ನಡೆಸಲಾಯಿತು. ಬಳಿಕ ಮಧ್ಯಾಹ್ನ ನ್ಯಾಯಾಲಯದ ಸಭಾಭವನದಲ್ಲಿ ಸಭೆ ನಡೆಸಿ, ಮಾತುಕತೆ ಮೂಲಕ ಜಟಾಪಟಿಗೆ ಇತಿಶ್ರೀ ಹಾಡಲಾಯಿತು.
ಮಾ. 8ರಂದು ಗ್ರಾಮೀಣ ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೇದೆಗಳಾದ ಗಣೇಶ ಕಾಂಬಳೆ ಹಾಗೂ ದೇವರಾಜ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಕೀಲ ಸುನೀಲ ಗುಡಿ ದೂರಿದ್ದರು. ಇದೇ ಕಾರಣಕ್ಕೆ ಗಣೇಶ ಕಾಂಬಳೆ ಹಾಗೂ ಸುನೀಲ ಗುಡಿ ಅವರಿಂದ ದೂರು ಪ್ರತಿದೂರು ದಾಖಲಾಗಿದ್ದವು. ಇದಾದ ಬಳಿಕ ವಕೀಲರ ಸಂಘದ ವತಿಯಿಂದ ಉಪನಗರ ಠಾಣೆ ಎದುರು ಬೃಹತ್ ಪ್ರತಿಭಟನೆ ಸಹ ನಡೆಸಲಾಗಿತ್ತು.
ಶುಕ್ರವಾರವೂ ವಕೀಲರ ಸಂಘದಿಂದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಆಗ ಸ್ಥಳೀಯ ಪೊಲೀಸ್ ಅಧಿಕಾರಿಗಳು ವಕೀಲರೊಂದಿಗೆ ಮಾತುಕತೆ ನಡೆಸಿ ಬೇಡಿಕೆಗಳನ್ನು ಆಲಿಸಿದ್ದರು. ಬಳಿಕ ಮಧ್ಯಾಹ್ನ ನ್ಯಾಯಾಲಯದ ಸಭಾಭವನದಲ್ಲಿ ಡಿಸಿಪಿ ಪಿ. ಕೃಷ್ಣಕಾಂತ, ಡಿಎಸ್ಪಿ ರಾಮನಗೌಡ ಹಟ್ಟಿ ಮತ್ತಿತರ ಅಧಿಕಾರಿಗಳು ಹಾಗೂ ಹಿರಿಯ ವಕೀಲರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತುಕತೆ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.
ಪೊಲೀಸ್ ಠಾಣೆಗಳಿಗೆ ವಕೀಲರು ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿ ಸೌಹಾರ್ದ, ಗೌರವದಿಂದ ನಡೆದುಕೊಳ್ಳಬೇಕು. ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಅನವಶ್ಯವಾಗಿ ಮಧ್ಯಪ್ರವೇಶಿಸಬಾರದು. ಇದಲ್ಲದೆ ಎರಡೂ ಪ್ರಕರಣ ರದ್ದು ಮಾಡಬೇಕು ಎಂದು ವಕೀಲರು ಆಗ್ರಹಿಸಿದರು. ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ವಕೀಲರೊಂದಿಗೆ ಗೌರವದಿಂದ ನಡೆದುಕೊಳ್ಳುವಂತೆ ಸಿಬ್ಬಂದಿಗೆ ತಿಳಿಸಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.
ನಂತರ ವಕೀಲ ಸುನೀಲ ಗುಡಿ ಹಾಗೂ ಪೊಲೀಸ್ ಪೇದೆ ಗಣೇಶ ಕಾಂಬಳೆ ಅವರನ್ನು ಕರೆಯಿಸಿ ಪರಸ್ಪರ ಮಾತುಕತೆ ನಡೆಸಿ ಕೈ ಕುಲುಕಿ ಪರಸ್ಪರ ರಾಜೀ ಮಾಡಿಕೊಳ್ಳುವ ಮೂಲಕ ಪ್ರಕರಣ ಅಂತ್ಯಗೊಳಿಸಿದರು.
ಸಭೆಯಲ್ಲಿ ಹಿರಿಯ ವಕೀಲರಾದ ಬಿ.ವಿ. ಸೋಮಾಪುರ, ವಿ.ಎಸ್. ಸವದತ್ತಿ, ಅರುಣ ಜೋಶಿ, ವಿ.ಡಿ. ಕಾಮರಡ್ಡಿ, ಸಿ.ಎಸ್. ಮೇಘನಾಳ, ಡಿ.ವಿ. ಕಲ್ಲನಗೌಡರ, ಪ್ರಕಾಶ ಉಡಿಕೇರಿ, ಸಂಘದ ಅಧ್ಯಕ್ಷ ಬಿ.ಎಸ್. ಘೊಡಸೆ, ಪದಾಧಿಕಾರಿಗಳಾದ ರಾಜು ಕೋಟೆ, ಆಶಿಷ್ ಮುಗದುಮ್ ರಾಜು ರಜಪೂತ, ಕೆ.ಎಚ್. ಪಾಟೀಲ, ಎನ್.ಬಿ. ಜೋಡಳ್ಳಿ, ರೂಪಾ ಕೆಂಗಾನೂರ, ಸುಶೀಲಾ ಪಾಟೀಲ, ಸುನಂದಾ ಆಯಟ್ಟಿ, ಇತರರು ಇದ್ದರು.