ಪೊಲೀಸ್ ಮತ್ತು ಡಿಸಿ ಕಚೇರಿ ಸಿಬ್ಬಂದಿಗಳ ನಡುವೆ ಮಾರಾಮಾರಿ

ಪೊಲೀಸ್ ಮತ್ತು ಡಿಸಿ ಕಚೇರಿ ಸಿಬ್ಬಂದಿಗಳ ನಡುವೆ ಮಾರಾಮಾರಿ
Published on

ಹಾಸನ: ಹಾಸನಾಂಬೆ ದೇವಿಯ ದರ್ಶನೋತ್ಸವದ ವೇಳೆ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳ ಸಿಬ್ಬಂದಿಗಳ ನಡುವೆ ಮಾರಾಮಾರಿ ನಡೆದ ಘಟನೆ ಮಂಗಳವಾರ ಸಂಜೆ ನಡೆಯಿತು.

ಶಿಷ್ಟಾಚಾರದ ವಾಹನವನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಶಶಿ ಎಂಬಾತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಶಶಿ ಎಂಬ ತನ್ನನ್ನು ಹೊರಗೆ ತಳ್ಳಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಪೊಲೀಸರನ್ನ ತರಾಟೆಗೆ ತೆಗೆದುಕೊಂಡರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ನಿಮ್ಮನ್ನ ಅಮಾನತು ಪಡಿಸುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದರು. ಇದರಿಂದ ಇಟ್ಟಿಗೆದ್ದ ಪೊಲೀಸ್ ಅಧಿಕಾರಿಗಳು ನಿಮ್ಮ ಸಿಬ್ಬಂದಿಯ ವರ್ತನೆ ಘಟನೆಗೆ ಕಾರಣ ಎಂದು ಏರು ಧ್ವನಿಯಲ್ಲಿ ಮಳವಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಮಾತನಾಡಿದರು.

ನಮ್ಮ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ ಗಾಯವಾಗಿದೆ. ಕೂಡಲೇ ಚಿಕಿತ್ಸೆ ಕೊಡಿಸಿ ಜಿಲ್ಲಾಧಿಕಾರಿಗಳಿಗೆ ತಿರುಗೇಟು ನೀಡಿದರು. ಇದರಿಂದ ಸ್ಥಳದಲ್ಲಿ ಕೆಲಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಗೇಟ್ ಮುಂದೆ ಪೊಲೀಸ್ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡದೆ ಕಂದಾಯ ಅಧಿಕಾರಿಗಳು ನಿಂತು ಕರ್ತವ್ಯ ನಿರ್ವಹಿಸುವಂತೆ ಆದೇಶ ಮಾಡಿದರು.

ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರ ಮಾತು ಮತ್ತು ವರ್ತನೆಗೆ ಪೊಲೀಸರು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ಆಗಮಿಸಿ ಮಾಹಿತಿ ಕಲೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net