ಪೊಲೀಸ್ ಬಂದೊಬಸ್ತ್ ಮೂಲಕ ಕಾಂಪೌಂಡ್ ನಿರ್ಮಾಣ ಕಾಮಗಾರಿ; ಗ್ರಾಮಸ್ಥರ ಪ್ರತಿಭಟನೆ

29_HSN_04
Published on

ಹಾಸನ: ವಿಮಾನ ನಿಲ್ದಾಣ ಕಾಪೌಂಡ್ ಕಾಮಗಾರಿ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಒಂದು ಕಡೆ ಪ್ರತಿಭಟನೆ ನಡೆಸುತ್ತಿದ್ದರೆ ಇನ್ನೊಂದು ಕಡೆ ಗ್ರಾಮಸ್ಥರು ಹತ್ತಿರ ಸುಳಿಯದಂತೆ ಭೂಸ್ವಾಧೀನವಾಗಿರುವ ಪ್ರದೇಶದ ಒತ್ತುವರಿ ಜಾಗದಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆಸಲಾಯಿತು.

ಈ ಹಿಂದೆ ಒತ್ತುವರಿ ಮಾಡಿದ ಜಾಗಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತೆರವು ಕಾರ್ಯಾಚರಣೆಗೆ ಗ್ರಾಮಸ್ಥರು ಅಡ್ಡಿಪಡಿಸಿದ್ದರು. ಆ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಧ್ಯ ಪ್ರವೇಶಿಸಿ ಜಂಟಿಯಾಗಿ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದರು. ಆ ನಂತರ ಜಿಲ್ಲಾಧಿಕಾರಿ, ಸಂಸದರ ಸಮ್ಮುಖದಲ್ಲಿ ಸಭೆ ನಡೆಸಿದರೂ ಅದು ಫಲಪ್ರದ ಆಗಿರಲಿಲ್ಲ. ನಂತರದಲ್ಲಿ ಡಿಸಿ ಸಿ. ಸತ್ಯಭಾಮಾ ಅವರ ಆದೇಶದಂತೆ ಬುಧವಾರ ಪೊಲೀಸ್ ಬಂದೊಬಸ್ತ್ ಮೂಲಕ ತೆರವು ಕಾರ್ಯಾಚರಣೆ ಮಾಡಲಾಗಿದೆ.

ಕೆಐಎಡಿಬಿ ಅಧಿಕಾರಿ ಹಾಗೂ ಹಾಸನ ಜಿಲ್ಲಾಡಳಿತದ ವತಿಯಿಂದ ಹಾಸನ ವಿಮಾನ ನಿಲ್ದಾಣದ 536.24 ಎಕರೆ ಭೂಮಿ ಸುತ್ತ ಜಮೀನಿನ ದುರಸ್ತಿ ಹಾಗೂ ಪೋಡಿ ಮಾಡದೆ ಪೊಲೀಸ್ ಬಂದೋಬಸ್ತ್‌ನಲ್ಲಿ ವಿಮಾನ ನಿಲ್ದಾಣದ ಸುತ್ತ ರೈತರ ವಿರುದ್ಧವಾಗಿ ಕಾಂಪೌಂಡ್ ನಿರ್ಮಾಣ ಮಾಡುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇತ್ತ ಸುಮಾರು 300 ಜನ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ವಿಮಾನ ನಿಲ್ದಾಣ ಕಾಂಪೌಂಡ್ ಕಾಮಗಾರಿ ನಡೆಸಲಾಯಿತು.

ಇದೆ ವೇಳೆ ಗ್ರಾಮಸ್ಥರಾದ ಬಬೊಮ್ಮೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನಿರ್ಮಾಣವಾಗುವ ವಿಮಾನ ನಿಲ್ದಾಣ ಪ್ರದೇಶದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರು ಈ ಮೊದಲು ಕಾಮಗಾರಿ ನಡೆಯುತ್ತಿರುವ ಜಾಗದಲ್ಲೇ ಸಂಚರಿಸುತ್ತಿದ್ದೆವು. ಕಾಂಪೌಂಡ್ ನಿರ್ಮಾಣ ಮಾಡುವುದರಿಂದ ನಮ್ಮ ಗ್ರಾಮಗಳಿಗೆ ತೆರಳಲು ಸುಮಾರು 7 ಕಿ.ಮೀ ಬಳಸಿಬರಬೇಕಾಗಿದೆ. ನಮಗೆ ಈಗ ರಸ್ತೆ ಇಲ್ಲವಾಗಿದೆ. ಪ್ರತ್ಯೇಕ ರಸ್ತೆ ಮಾಡಿಕೊಡಿ ಎಂಬ ರೈತರ ಬೇಡಿಕೆಯನ್ನು ಒಪ್ಪಿ 536 ಎಕರೆಯಲ್ಲೇ ವಿಮಾನ ನಿಲ್ದಾಣದ ಬೌಂಡರಿ ಅಂಚಿನಲ್ಲೇ ಸುಮಾರು 9 ಮೀಟರ್ ಅಗಲದ 5 ಕಿ.ಮೀ.ಉದ್ದದ ರಸ್ತೆ ನಿರ್ಮಾಣಕ್ಕೆ ಸುಮಾರು 5 ಎಕರೆ ಜಾಗದಲ್ಲಿ ರಸೆ ನಿರ್ಮಿಸಿಕೊಡಲು ಈ ಮುಂಚೆ ಕೆಐಎಡಿಬಿ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಈಗ ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡದೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ ರೈತರಿಗೆ ತಮ್ಮ ಜಮೀನು ಮತ್ತು ಗ್ರಾಮಗಳಿಗೆ ತೆರಳಲು ಇರುವ ಸಂಪರ್ಕ ರಸ್ತೆಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿದರೆ ನಮಗೆ ಓಡಾಡಲು ರಸ್ತೆಯೇ ಇಲ್ಲ. ತಮ್ಮ ಗ್ರಾಮಗಳಿಗೆ ತೆರಳಲು ಪರ್ಯಾಯ ರಸ್ತೆ ಬೇಕು. ಪರ್ಯಾಯವಾಗಿ ನೀಡಿರುವ ರಸ್ತೆಗೆ ಕಾಮಗಾರಿಯೂ ಆಗಿಲ್ಲ. ಜಮೀನು ಕಳೆದುಕೊಂಡ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಭೂಮಿ ಕಳೆದುಕೊಂಡ ಕೆಲವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಹಾರ ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.

ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ನವೀನ್ ಕುಮಾರ್, ಗ್ರಾಮಸ್ಥ ದಿನೇಶ್, ಬೋಮ್ಮೇಗೌಡ ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ರೈತರು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮೀನು ಕಳೆದುಕೊಂಡಿರುವ ಸುಮಾರು ಏಳು ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇದೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಹಾಸನ ಉಪವಿಭಾಗಾಧಿಕಾರಿ ಮಾರುತಿ. ತಹಸೀಲ್ದಾರ್ ಶ್ವೇತಾ ಸೇರಿಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net