ಪೊಲೀಸ್ ಪೇದೆಗಳಿಂದ ನಿಂದನೆ ಆರೋಪ:ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

ಪೊಲೀಸ್ ಪೇದೆಗಳಿಂದ ನಿಂದನೆ ಆರೋಪ:ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ
Published on

ಹಾಸನ: ಮೂವರು ಪೊಲೀಸರು ಮದ್ಯಪಾನ ಮಾಡಿ ಹಾಸ್ಟೆಲ್ ಪ್ರವೇಶಿಸಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬುಧವಾರ ಮಧ್ಯೆ ರಾತ್ರಿಯಲ್ಲಿ ಪ್ರತಿಭಟನೆ ನಡೆಸಿದ್ದು, ಡಿವೈಎಸ್‌ಪಿ ಮಧ್ಯೆ ಪ್ರವೇಶ ಮಾಡಿ, ಪೊಲೀಸರು ಕ್ಷಮೆಯಾಚಿಸಿದ ಬಳಿಕ ಪ್ರತಿಭಟನೆ ಹಿಂಪಡೆಲಾಗಿದೆ.

ನಗರದ ವಿದ್ಯಾನಗರದಲ್ಲಿರುವ ಪರಿಶಿಷ್ಟ ಜಾತಿ ಹಾಗು ಪಂಗಡದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿನಿಲಯಕ್ಕೆ ಮೂವರು ಪೊಲೀಸ್ ಪೇದೆಗಳು ಬುಧವಾರ ರಾತ್ರಿ ಮದ್ಯಪಾನ ಮಾಡಿ ಅಕ್ರಮ ಪ್ರವೇಶ ಮಾಡಿ, ಕಾನೂನು ಹಾಗು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗೆ ನೀನು ಯಾರು? ಯಾವ ಜಾತಿ ಎಂದು ಕೇಳಿದ್ದಾರೆ ಆರೋಪಿಸಲಾಗಿದೆ.

ವಿದ್ಯಾರ್ಥಿಯು ದಲಿತ ಎಂದು ಹೇಳಿದಾಗ ನೀನು ದಲಿತ ಆಗಿದ್ದರೆ ನಾನು ಏನು ಮಾಡಲಿ, ಹಣ ಎಷ್ಟಿದೆ, ಯಾವ ಹಾಸ್ಟೆಲ್ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಅಂಬೇಡ್ಕರ್ ಹಾಸ್ಟೆಲ್ ಎಂದು ಹೇಳಿದ್ದಕ್ಕೆ ಯಾವ ಅಂಬೇಡ್ಕರ್ ಎಂದು ಅವಾಚ್ಯ ಹಾಗು ಹಗುರ ಶಬ್ದಗಳಿಂದ ಮಾತನಾಡಿ ನಿಂದಿಸಿದ್ದಾರೆ. ಇದನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಲು ಮೊಬೈಲ್ ತೆಗೆದಾಗ ಮೊಬೈಲ್ ಕಿತ್ತು ಒಡೆದು ಹಾಕಿ ಅಲ್ಲಿಂದ ಹೋಗಿದ್ದಾರೆ.

ಪೊಲೀಸರ ಈ ವರ್ತನೆ ಖಂಡಿಸಿ ಹಾಸ್ಟೆಲ್‌ನ ಎಲ್ಲಾ ವಿದ್ಯಾರ್ಥಿಗಳು ಮಧ್ಯರಾತ್ರಿ 12 ಗಂಟೆಗೆ ಒಟ್ಟಿಗೆ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಸುದ್ದಿ ತಿಳಿದ ಹಾಸನ ಡಿವೈಎಸ್‌ಪಿ. ಪಿ.ಕೆ.ಮುರುಳಿಧರ್ ಅವರು 2 ಗಂಟೆ ಸುಮಾರಿಗೆ ಆಗಮಿಸಿ, ಬೆಳಗ್ಗಿನ ಜಾವ 3 ಗಂಟೆವರೆಗೂ ಚರ್ಚೆ ಮಾಡಿ, ಅವಹೇಳನಕಾರಿಯಾಗಿ ಮಾತನಾಡಿದ ಮೂವರು ಪೊಲೀಸರನ್ನು ಕರೆಸಿ ನಿಲಯದ ವಿದ್ಯಾರ್ಥಿಗಳ ಕ್ಷಮೆಯಾಚಿಸಿದ್ದಾರೆ.

ಹಾಗೆಯೇ ಅಂಬೇಡ್ಕರ್ ಬಗ್ಗೆ ಮಾತನಾಡಿದ ಅವರಿಗೆ ಅಂಬೇಡ್ಕರ್ ಭಾವಚಿತ್ರದ ಎದುರು ನಿಲ್ಲಿಸಿ ಕೈ ಮುಗಿಸಿ ಕ್ಷಮೆ ಕೇಳಿಸಿದ್ದಾರೆ ಬಳಿಕ ಪರಿಸ್ಥಿತಿ ಸುಧಾರಿಸಿದೆ.

ತಪ್ಪಿಸಸ್ಥರ ವಿರುದ್ಧ ಸೂಕ್ತ ಕ್ರಮ: ಎಸ್.ಪಿ

ನಗರದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಡಿ.ವೈ.ಎಸ್.ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ತಪ್ಪಿಸಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ತಿಳಿಸಿದರು.

ಹಾಸ್ಟೆಲ್‌ನಲ್ಲಿ ಕುಡಿದು ಗಲಾಟೆ ಆಗುತ್ತಿರುವ ಬಗ್ಗೆ ಬುಧವಾರ ಮಧ್ಯರಾತ್ರಿ 11:30 ಸಮಯಕ್ಕೆ 112ನಂಬರ್ ದೂರು ಬಂದಿದ್ದು, ಈ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ನಾಲ್ಕು ಜನ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ ನಂತರ ಒಬ್ಬ ಸಿಬ್ಬಂದಿ ಪರಿಶೀಲನೆಗೆ ಮುಂದಾಗಿದ್ದಾಗ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೂಮ್‌ಗೆ ಹೋಗಿ ನೋಡಿ ಅಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೂಡ ಪೊಲೀಸರನ್ನು ವಿಡಿಯೋ ಮಾಡಲು ಮುಂದಾಗಿದ್ದಾರೆ.ಈ ಸಂದರ್ಭದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ತಕ್ಷಣವೇ ಡಿ.ವೈ.ಎಸ್.ಪಿ. ಮುರಳಿಧರ್ ಮತ್ತು ಇನ್ಸ್‌ಪೆಕ್ಟರ್‌ಗಳಾದ ಸ್ವಾಮಿನಾಥನ್ ಮತ್ತು ಮಧು ಅವರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದ್ದಾರೆ ಅಲ್ಲದೆ ಅಲ್ಲಿಯ ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದರು.

ವಿದ್ಯಾರ್ಥಿಗಳು ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾತ್ರಿ ಹಾಸ್ಟೆಲ್‌ಗೆ ತೆರಳಿದಂತಹ ಎಲ್ಲಾ ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರು ಯಾರು ಕೂಡ ಮಧ್ಯ ಸೇವಿಸಿರಲಿಲ್ಲ ಎಂಬುದು ದೃಢಪಟ್ಟಿದೆ. ಅಲ್ಲದೆ ಇವರು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ ಮತ್ತು ಜಾತಿನಿಂದನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರು ದುರುದ್ದೇಶದಿಂದ ನಡೆದುಕೊಂಡಿಲ್ಲ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದರು.

ಈಗಾಗಲೇ ಡಿ.ವೈ.ಎಸ್.ಪಿ. ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಇದರಲ್ಲಿ ನಮ್ಮ ಸಿಬ್ಬಂದಿಗಳು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕೂಡ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ ಕಂಟ್ರೋಲ್ ರೂಮಿಗೆ ಕರೆ ಮಾಡಿದಂತಹವರು ಹಾಗೂ ಹಾಸ್ಟೆಲ್‌ನಲ್ಲಿ ನಡೆದಿರುವ ಘಟನೆಯ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net