ಪೊಲೀಸ್ ಠಾಣೆಯಲ್ಲೇ ಬೈಕ್ ಕದ್ದ ಕಳ್ಳರು...

IMG-20250210-WA0010
Published on

ಚಾಮರಾಜನಗರ: ಕಳ್ಳರನ್ನು ಹಿಡಿಯಬೇಕೆಂದು ದೂರು ಕೊಡಲು ಬರುವ ಪೊಲೀಸ್ ಠಾಣೆಯಲ್ಲೇ ಕಳ್ಳತನವಾಗಿದೆ. ಠಾಣೆ ಕಾಂಪೌಂಡ್ ನೆಗೆದು ಬಂದ ಇಬ್ಬರು ಕಳ್ಳರು ಗೇಟ್ ಮುರಿದು ಬೈಕ್ ಕದ್ದು ಹೋಗಿದ್ದಾರೆ.

ಚಾಮರಾಜನಗರದ ಸತ್ತಿ ರಸ್ತೆಯಲ್ಲಿರುವ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ (ಸಿಇಎನ್) ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಇಬ್ಬರು ಚಾಲಾಕಿಗಳು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ಶಿವಕುಮಾರ್ ಪಟ್ಟಣ ಪೊಲೀಸ್ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ.

ಶನಿವಾರ ರಾತ್ರಿ ಕರ್ತವ್ಯ ಮುಗಿಸಿಕೊಂಡು, ಠಾಣೆಯ ಮುಂಭಾಗದ ಗೇಟ್ ಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಫೈರಿಂಗ್ ತರಬೇತಿಗೆ ಹೋಗುವ ಸಲುವಾಗಿ ಠಾಣೆಗೆ ಬಂದಿದ್ದ ಪಿಸಿ ಮೋಹನ್ ಅವರು ಗೇಟ್ ಬೀಗ ಇಲ್ಲದಿರುವುದನ್ನು ಶಿವಕುಮಾರ್ ಅವರ ಗಮನಕ್ಕೆ ತಂದಿದ್ದಾರೆ. ಈ ವೇಳೆ ಅನುಮಾನ ಬಂದು ಹುಡುಕಾಡಿದಾಗ, ಸಮೀಪದ ಕಾಂಪೌಂಡ್ ಮೇಲೆ ಬೀಗ ಇಟ್ಟಿರುವುದು ಗಮನಕ್ಕೆ ಬಂದಿದೆ. ಇದನ್ನು ನೋಡಿದಾಗ ರಾತ್ರಿಯ ವೇಳೆಯಲ್ಲಿ ಯಾರೋ ಬೀಗವನ್ನು ಮುರಿದು ಗೇಟ್ ತೆಗೆದಿರುವುದು ಕಂಡು ಬಂದಿದೆ.

ಈ ಸಂದರ್ಭದಲ್ಲಿ ಸೆನ್ ಠಾಣೆಯ ಪೊಲೀಸರು ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದು, ಯಾರೋ ಇಬ್ಬರು ಖದೀಮರು ಬೆಳಗಿನ ಜಾವ 1.20 ರ ಸಮಯದಲ್ಲಿ ಕಾಂಪೌಂಡ್ ನಿಂದು ಜಿಗಿದು ಠಾಣೆಯ ಆವರಣಕ್ಕೆ ಬಂದಿದ್ದಾರೆ. ಸುಮಾರು ಅರ್ಧ ತಾಸು ಅಲ್ಲೇ ಇದ್ದು, ಬಳಿಕ ಕಾಂಪೌಂಡ್ ಹಾರಿ ಹೊರಗಡೆ ಹೋಗಿ ಗೇಟ್ ಬೀಗವನ್ನು ರಾಡಿನಿಂದ ಮುರಿದು ಒಳ ಬಂದಿದ್ದಾರೆ. ಬಳಿಕ ಠಾಣೆಯ ಶೆಡ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಈ ಸಂಬಂಧ ಪೊಲೀಸ್ ಪೇದೆ ಶಿವಕುಮಾರ್ ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net