ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ...!

8 (1)
Published on

ಮೈಸೂರು: ಪೊಲೀಸ್ ಠಾಣೆಯಲ್ಲೇ ಮಹಿಳಾ ಕಾನ್‌ಸ್ಟೇಬಲ್‌ಗೆ ಸೀಮಂತ ಮಾಡುವ ಮೂಲಕ ಪೊಲೀಸರು ಗಮನ ಸೆಳೆದಿದ್ದಾರೆ.
ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ರೇಖಾ ಅವರಿಗೆ ಸೀಮಂತ ಮಾಡುವ ಮೂಲಕ ಮಹಿಳಾ ಮತ್ತು ಪುರುಷ ಸಿಬ್ಬಂದಿ ಸಂಭ್ರಮಿಸಿದರು. ರೇಖಾ ಅವರಿಗೆ ಕೈ ಬಳೆ ತೊಡಿಸಿ, ಹೂ ಮುಡಿಸುವ ಮೂಲಕ ಈ ಶಾಸ್ತ್ರ ಮಾಡಲಾಯಿತು.
ಠಾಣೆಯ ಎಲ್ಲ ಸಿಬ್ಬಂದಿ ಶುಭ ಹಾರೈಸಿದ ಪರಿಗೆ ರೇಖಾ ಭಾವುಕರಾದರು. ಬಳಿಕ ಮಾತನಾಡಿದ ಅವರು, ಮನೆಯಲ್ಲಿ ಸಿಗುವ ರೀತಿಯ ಆತ್ಮೀಯತೆ ಠಾಣೆಯಲ್ಲೂ ಸಿಕ್ಕಿದೆ. ಪೊಲೀಸ್ ಠಾಣೆಗಳು ಜನಸ್ನೇಹಿ ಮಾತ್ರವಲ್ಲ. ಸಿಬ್ಬಂದಿ ನಡುವಿನ ಸ್ನೇಹ ಬಾಂಧವ್ಯಕ್ಕೂ ಸಾಕ್ಷಿಯಾಗಿದೆ ಎಂದರು. ಸಬ್‌ಇನ್ಸ್‌ಪೆಕ್ಟರ್ ದಿವಾಕರ್, ಪಿಎಸ್‌ಐಗಳಾದ ರಾಜು, ಲೀಲಾವತಿ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿಯಾಗಿರುವ ರೇಖಾ, ಕಳೆದ 4 ವರ್ಷಗಳಿಂದ ಈ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೇಖಾ ಪತಿ ರಾಜೇಶ್ ಬೆಂಗಳೂರಿನ ಬಿಎಂಟಿಸಿಯಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net