ಪೊಲೀಸ್ ಠಾಣೆಗೆ ನಾಗರಿಕರಿಂದ ಪೂಜೆ!

h3-Ghantikeri PS
Published on

ಹುಬ್ಬಳ್ಳಿ: ಇಲ್ಲಿನ ಘಂಟಿಕೇರಿ ಪೊಲೀಸ್ ಠಾಣೆಗೆ ಸ್ಥಳೀಯರು ಭಾನುವಾರ ಕಾಯಿ ಒಡೆದು, ದೀಪ ಬೆಳಗಿ ಪೂಜೆ ನೆರವೇರಿಸುವ ಮೂಲಕ ಕರೊನಾ ಸೇನಾನಿಗಳಿಗೆ ವಿಶಿಷ್ಟವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಬೆಳಗ್ಗೆ ಠಾಣೆಗೆ ಆಗಮಿಸಿದ ಇಲ್ಲಿನ ಬಮ್ಮಾಪುರ ಓಣಿ ಹಿರಿಯರು ಠಾಣೆಯ ಬಾಗಿಲಿಗೆ ವಿಭೂತಿ ಬಳಿದು, ಅಗರಬತ್ತಿ ಹಚ್ಚಿ, ದೀಪ ಬೆಳಗಿ, ಕಾಯಿ ಒಡೆದು ಪೂಜೆ ಸಲ್ಲಿಸಿದರು. ಲಾಕ್​ಡೌನ್ ಘೊಷಣೆಯಾದ ದಿನದಿಂದ ಈವರೆಗೆ ವೈರಸ್ ಹರಡುವಿಕೆಯನ್ನು ತಡೆಯಲು ಪೊಲೀಸರು ಹಗಲು- ರಾತ್ರಿ ಸೇವೆಗೈದಿದ್ದಾರೆ.

ಘಂಟಿಕೇರಿ ಪೊಲೀಸರು ಜೀಪ್​ನಲ್ಲಿ ಬಡಾವಣೆಗಳಿಗೆ ತೆರಳಿ ಧ್ವನಿವರ್ಧಕ ಬಳಸಿ ಜಾನಪದ ಗೀತೆಗಳಿಂದ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ಆ ಮೂಲಕ ಜನ ಮನೆಯಿಂದ ಹೊರಗೆ ಬಾರದಂತೆ ಎಚ್ಚರವಹಿಸಿದ್ದಾರೆ. ಜತೆಗೆ ಎಲ್ಲ ದೇವಸ್ಥಾನ, ಮಸೀದಿ, ಚರ್ಚ್​ಗಳು ಬಂದ್ ಆಗಿವೆ.

ಜನರನ್ನು ರಕ್ಷಿಸುವ ಪೊಲೀಸ್ ಠಾಣೆಯೇ ನಮಗೆ ದೇವಸ್ಥಾನವಿದ್ದಂತೆ. ಆದ್ದರಿಂದ ಠಾಣೆಗೆ ಪೂಜೆ ಸಲ್ಲಿಸುವ ಮೂಲಕ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದೇವೆ ಎಂದು ಸ್ಥಳೀಯರಾದ ಮಂಜುನಾಥ ಯಂಟ್ರುವಿ, ವಿನಾಯಕ ಹಿಂಗಣಕರ್, ಕಾಶೀನಾಥ ಸೂರ್ಯವಂಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net