ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಕೆಲಸ:ಆರ್.ಅಶೋಕ

ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಕೆಲಸ:ಆರ್.ಅಶೋಕ
Published on

ಹಾಸನ: ಕಾಂಗ್ರಸ್ ಸರ್ಕಾರದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಕೆಲಸ ಮಾಡುತ್ತಿವೆ. ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ, ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಪ್ರಕರಣದ ದಾಖಲಿಸಿದ್ದಾರೆ. ಕಾನ್ಸ್‌ಟೇಬಲ್ ದೂರು ನೀಡುತ್ತಾನೆ, ಇನ್ಸ್‌ಪೆಕ್ಟರ್ ಪ್ರಕರಣದ ದಾಖಲಿಸುತ್ತಿದ್ದಾನೆ ಎಂದು ಕಿಡಿಕಾರಿದರು.
ಈ ಸರ್ಕಾರದಲ್ಲಿ ಖಜಾನೆ ದರೋಡೆ ಮಾಡುತಿದೆ. ಅಭಿವೃದ್ಧಿ ಕೆಲಸಗಳಿಗೆ ನೀಡಲು ಹಣವಿಲ್ಲ ಎಂದು ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ ಇದೆ, ಅದು ಯಾವಾಗ ಭುಗಿಲೇಳುತ್ತದೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದರೆ ಕೋಮುವಾದಿ ಮುಸ್ಲಿಮರಿಗೆ ಹಬ್ಬ ಇದ್ದ ಹಾಗೆ, ನಮ್ಮದು ಸರ್ಕಾರ ಇದೆ ಎನ್ನುತಾರೆ, ಯಾವುದೇ ರಸ್ತೆಯಲ್ಲಿ ಗಣೇಶನ ಮೆರವಣಿಗೆ ಮಾಡುವ ಹಾಗಿಲ್ಲ, ಇಡೀ ರಾಜ್ಯದಲ್ಲಿ ಗಣೇಶ ಹಬ್ಬ ತುರ್ತು ಪರಿಸ್ಥಿತಿ ಇದ್ದಹಾಗೆ ಆಗಿದೆ. ಗಣೇಶನನ್ನು ಎಲ್ಲಿ, ಎಷ್ಟು ದಿನ ಕೂರಿಸಬೇಕೆಂದು ಪೊಲೀಸರು ತೀರ್ಮಾನ ಮಾಡುತ್ತಾರೆ ಎಂದು ದೂರಿದರು.
ಅಭಿವೃದ್ಧಿ ಕೆಲಸಗಳನ್ನು ಮಾಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಹಳೆಯ ಪ್ರಕರಣಗಳನ್ನು ಹುಡುಕಿ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಿಸಲು ಹೊರಟಿದೆ, ಇದಕ್ಕೆ ನಾವೇನು ಹೆದರುವುದಿಲ್ಲ,ಕಾಂಗ್ರೆಸ್ ಸರ್ಕಾರ ಗೂಟ ಹೊಡೆದುಕೊಂಡು ಇರುವುದಿಲ್ಲ, ಅವರ ಪಕ್ಷದ ಶಾಸಕರೇ ಸರ್ಕಾರ ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂಬ ಮಾತಿನಂತೆ ಸರ್ಕಾರ ಬದಲಾದ ಮೇಲೆ ನಿಮಗೂ ಇದು ತಿರುಗುಬಾಣವಾಗುತ್ತದೆ. ಈ ತರಹದ ದ್ವೇಷ ರಾಜಕಾರಣ, ಹಳೆಯದನ್ನು ಹುಡುಕುವುದು ಒಳ್ಳೆಯದಾಗಲ್ಲ. ಇದನ್ನು ಹೀಗೆ ಮುಂದುವರೆಸಿದರೆ ನಿಮ್ಮ 50 ಐವತ್ತು ವರ್ಷದ್ದನ್ನು ನಾವು ಹುಡುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿನೋಟಿಫಿಕೇಷನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿನೋಟಿಫಿಕೇಷನ್ ಆಗಿ ಹದಿನೈದು ವರ್ಷ ಆಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿ ಆಗಿದ್ದರು. ಆಗ ಕುಮಾರಸ್ವಾಮಿ ಪಕ್ಕ ಕುಳಿತಿದ್ದರೂ ಏಕೆ ಪ್ರಶ್ನೆ ಮಾಡಲಿಲ್ಲ. ಈಗ ಆರೋಪ ಮಾಡುತ್ತಿರುವವರೆಲ್ಲ ಆಗ ಏನು ಮಾಡುತ್ತಿದ್ದರು. ಆಗ ಪ್ರೀತಿ ಇತ್ತು, ಈಗ ದ್ವೇಷ ಇದೆ ಹಾಗಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಸಂಬಳ ಕೊಡಲು ದುಡ್ಡಿಲ್ಲ, ರೈತರ ಹಾಲಿನ ಸಬ್ಸಿಡಿ ಹಣ ನೀಡಿಲ್ಲ, ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳು ಬರುತ್ತಲೇ ಇವೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವ ಮೇಲೆ ಕೇಸ್ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಚನ್ನಪಟ್ಟಣ ಅಭ್ಯರ್ಥಿ ಹೈಕಮಾಂಡ್ ತೀರ್ಮಾನ:
ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಜೆಡಿಎಸ್ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅಲ್ಲಿ ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ. ಮೂರು ದಿನ ದೆಹಲಿಯಲ್ಲಿದ್ದು ಈ ಬಗ್ಗೆ ಕೇಂದ್ರದ ನಾಯಕರ ಜೊತೆ ಮಾತನಾಡಿದ್ದೇನೆ. ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆಯೂ ಮಾತನಾಡಿದ್ದೇನೆ. ಸಿ.ಪಿ.ಯೋಗೇಶ್ವರ್, ನಿಖಿಲ್ ಕುಮಾರಸ್ವಾಮಿ ಆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ನಾನು ಯೋಗೇಶ್ವರ್ ಜೊತೆ ಹೋದಾಗಲೂ ನಾನು ಅದನ್ನೇ ಹೇಳಿದ್ದೇನೆ ಎಂದರು.
ಸತ್ಯಾಸತ್ಯತೆ ಹೊರಗೆ ಬರಲಿ:
ತಿರುಪತಿ ಲಾಡುವಿನಲ್ಲಿ ಕೊಬ್ಬಿನ ಅಂಶ ಪತ್ತೆ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರ, ಆಂಧ್ರಪ್ರದೇಶದ ಸರ್ಕಾರಕ್ಕೆ ಪತ್ರ ಬರೆದು ಉತ್ತರ ಕೇಳಿದೆ. ತಿರುಪತಿ ಇಡೀ ಪ್ರಪಂಚದಲ್ಲೇ ಕೋಟ್ಯಾಂತರ ಭಕ್ತರನ್ನು ಹೊಂದಿರುವ ಶ್ರದ್ಧಾ ಕೇಂದ್ರ. ಅದರಲ್ಲಿ ಈ ರೀತಿ ಆಗಿದೆ ಎಂದರೆ ಎಲ್ಲರ ಮನಸ್ಸಿಗೆ ನೋವು ಆಗಿದೆ. ಹಿಂದೆ ಇದ್ದ ಸರ್ಕಾರ ಮಾಡಿದೆ ಎಂದು ಆರೋಪಿಸಲಾಗಿದೆ, ಅವರು ನಿರಾಕರಿಸಿದ್ದಾರೆ. ಈಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಸತ್ಯಾಸತ್ಯತೆ ಹೊರಗೆ ಬರಲಿ. ಮಾರುಕಟ್ಟೆಯಲ್ಲಿ ಇರುವ ಬೆಲೆಗಿಂತ ಕಡಿಮೆ ಬೆಲೆಗೆ ತುಪ್ಪ ಕೊಡಲು ಹೇಗೆ ಸಾಧ್ಯ. ನಮ್ಮ ಸರ್ಕಾರ ಇದ್ದಾಗ ನಂದಿನ ತುಪ್ಪ ಕೊಡಲು ಪ್ರಯತ್ನ ಮಾಡಿದ್ದು ಆ ಬೆಲೆಗೆ ನಾವು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ವಿ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಹಿಂದಿನ ಸರ್ಕಾರ ಮಾಡಿದ್ದರೆ ಅವರ ವಿರುದ್ಧ ಕ್ರಮ ಆಗಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net