ಪೊಲೀಸ್ ಠಾಣೆಗಳಲ್ಲಿ ಪ್ರತಿ ಗುರುವಾರ ಶಾಲಾ ಮಕ್ಕಳಿಗೆ ಅರಿವು

26 ckm 5 web
Published on

ಚಿಕ್ಕಮಗಳೂರು: ಪೊಲೀಸ್ ಠಾಣೆಗಳಲ್ಲಿ ಪ್ರತಿ ಗುರುವಾರ ತೆರೆದ ಮನೆ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದ್ದು ಶಾಲೆಗಳಿಂದ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಯುನಿಸೆಫ್ ಸಂಯೋಜಕ ರಾಘವೇಂದ್ರ ಭಟ್ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಸರ್ಕಾರಿ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಯಾ ಠಾಣಾ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಠಾಣಾಧಿಕಾರಿಗಳು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇದರಿಂದ ಮಕ್ಕಳಿಗೆ ಯಾವುದೇ ಶೋಷಣೆಯನ್ನು ಮುಕ್ತವಾಗಿ ತಿಳಿಸಲು ಸಾಧ್ಯ ಎಂದರು.

ಶೋಷಣೆ ಹಾಗೂ ಹಿಂಸೆಯಿಂದ ಮಕ್ಕಳನ್ನು ರಕ್ಷಿಸಲು ಅಧಿಕಾರಿಗಳು ಕಾನೂನಾತ್ಮಕ ಪೋಷಕರು. ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರಾಮಾಣಿಕವಾಗಿ ದುಡಿಯಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಕೆಲವೇ ಇಲಾಖೆಗೆ ಸೀಮಿತ ಎಂಬ ಮನಸ್ಥಿತಿಯಿಂದ ಅಧಿಕಾರಿಗಳು, ಸಿಬ್ಬಂದಿ ಹೊರಬರಬೇಕು. ಮಕ್ಕಳ ಎಲ್ಲ ಹಕ್ಕಗಳನ್ನೂ ಗೌರವಿಸುವಂಥ ವಾತಾವರಣ ನಿರ್ವಣವಾಗುವುದು ಅವಶ್ಯ. ಬಾಲ್ಯ ವಿವಾಹ, ಲೈಂಗಿಕ ಶೋಷಣೆಗಳನ್ನು ತಪ್ಪಿಸಲು ಹೆಚ್ಚಿನ ಇಲಾಖೆಗಳ ಅಧಿಕಾರಿಗಳನ್ನು ಅನುಷ್ಠಾನಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ದುಡಿದರೆ, ಮಕ್ಕಳ ಮೇಲಿನ ಹಿಂಸೆ, ಶೋಷಣೆ ನಿಯಂತ್ರಿಸಬಹುದು ಎಂದು ಹೇಳಿದರು. </p><p>ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವರ್ಷಕ್ಕೊಮ್ಮೆ ಮಕ್ಕಳ ಗ್ರಾಮ ಸಭೆ ನಡೆಸುವುದು ಕಡ್ಡಾಯ. ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚಿಸಲಾಗಿದೆ. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಶೇ.100 ಇರುವಂತೆ ನೋಡಿಕೊಳ್ಳುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಸೇರ್ಪಡೆ ಮಾಡುವುದೂ ಗ್ರಾಪಂಗಳ ಕರ್ತವ್ಯ ಎಂದು ತಿಳಿಸಿದರು.

ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಅಧೀನ ಸಿಬ್ಬಂದಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ಆಗಾಗ ಪರಿಶೀಲಿಸಬೇಕು. ಇದರಿಂದ ಬಾಲ್ಯವಿವಾಹ, ಮಕ್ಕಳ ಕಳ್ಳ ಸಾಗಣೆ, ಮಕ್ಕಳ ಮೇಲಿನ ಶೋಷಣೆಗಳನ್ನು ತಳಹಂತದಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಿ ಮಕ್ಕಳಿಗೆ ರಕ್ಷಣೆ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net