ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

1NGD1
ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಮಗನ ಸಾವಿಗೆ ಕಾರಣವಾಗಿರುವ ಚಾಲಕನನ್ನು ಬಂಧಿಸುವಂತೆ ಒತ್ತಾಯಿಸಿ ಮೃತ ಯುವಕನ ಪಾಲಕರು ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಮಹೇಶ್, ಸುಧಾ, ಪ್ರದೀಪ್, ಆನಂದ್ ಇತರರು ಇದ್ದರು.
Published on

ನಂಜನಗೂಡು: ಅಜಾಗರೂಕತೆಯಿಂದ ಕಾರು ಚಾಲನೆ ಮಾಡುವ ಮೂಲಕ ನಮ್ಮ ಮಗನ ಸಾವಿಗೆ ಕಾರಣವಾಗಿರುವ ಚಾಲಕನನ್ನು ಬಂಧಿಸುವಂತೆ ಒತ್ತಾಯಿಸಿ ಮೃತನ ಪಾಲಕರು ಸ್ಥಳೀಯರೊಂದಿಗೆ ಬುಧವಾರ ನಗರದ ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರಸಭೆ ಮಾಜಿ ಸದಸ್ಯರಾದ ಸುಧಾ ಮಹೇಶ್ ಹಾಗೂ ಮಹೇಶ್ ದಂಪತಿ ಪುತ್ರ ಪ್ರವೀಣ್(23) 2020ರ ಮೇ 18ರಂದು ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದನು.

ಅಪಘಾತ ಪ್ರಕರಣ ಸಂಭವಿಸಿದ 2 ವರ್ಷ 9 ತಿಂಗಳಾದರೂ ಈವರೆಗೂ ಕಾರು ಚಾಲಕನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಮುಂದಾಗಿಲ್ಲ ಎಂದು ಆರೋಪಿಸಿ ಮೃತ ಯುವಕನ ತಂದೆ ಪುರಸಭೆ ಮಾಜಿ ಸದಸ್ಯ ಮಹೇಶ್ ಹಾಗೂ ತಾಯಿ ನಗರಸಭೆ ಮಾಜಿ ಸದಸ್ಯೆ ಸುಧಾ ಮಹೇಶ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.

ಮಹೇಶ್ ಮಾತನಾಡಿ, ಮದ್ಯಪಾನ ಮಾಡಿದ್ದ ಕಾರು ಚಾಲಕ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ನಮ್ಮ ಮಗನ ಸಾವಿಗೆ ಕಾರಣವಾಗಿದ್ದಾನೆ. ಆರೋಪಿಯನ್ನು ಬಂಧಿಸುವಂತೆ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರ ಮೇಲೆ ಒತ್ತಡ ಹಾಕಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ಬಾರಿ ಗುಜರಾತಿಗೆ ತೆರಳಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಮುಂದಾಗಿಲ್ಲ. ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸದ ಹೊರತಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆಗಮಿಸಿ ಸ್ಪಷ್ಟ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಪ್ರದೀಪ್, ಮಾಜಿ ಸದಸ್ಯ ಕೆ.ಜಿ.ಆನಂದ್, ಗಜ, ವೀರಶೈವ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಸಿ.ಬಸವಣ್ಣ, ಗಣೇಶ್, ಉಮೇಶ್ ಮೋದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net