

ಧಾರವಾಡ: ನಗರದ ಶಹರ ಠಾಣೆಯ ಮಹಿಳಾ ಮುಖ್ಯ ಪೇದೆಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಠಾಣೆಯನ್ನು ಬಂದ್ ಮಾಡಿ ಸಂದರ್ಶಕರ ಕೊಠಡಿಗೆ ಸ್ಥಳಾಂತರ ಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದ್ದು, ಮುಖ್ಯ ದ್ವಾರ ಮುಚ್ಚಲಾಗಿದೆ. ವಿಶೇಷ ಎಂದರೆ, ಈ ದ್ವಾರಕ್ಕೆ ಬೀಗದ ಬದಲು ಬೇಡಿ ಹಾಕಲಾಗಿದೆ.
ಕರ್ತವ್ಯನಿರತ ಮಹಿಳಾ ಮುಖ್ಯ ಪೇದೆಗೆ ಇತ್ತೀಚೆಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಠಾಣೆಯ ಒಳ ಮತ್ತು ಹೊರಭಾಗದಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಶನಿವಾರ ಮತ್ತಷ್ಟು ಜಾಗೃತರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ, ಮುಖ್ಯ ಬಾಗಿಲಿಗೆ ಬೇಡಿ ಹಾಕಿ ಬಂದ್ ಮಾಡಿದರು. ಠಾಣೆಯನ್ನು ತಾತ್ಕಾಲಿಕವಾಗಿ ಎದುರಿನ ಸಂದರ್ಶಕರ ಕೊಠಡಿಗೆ ಸ್ಥಳಾಂತರ ಮಾಡಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಲಾಕ್ಡೌನ್ ಸ್ವಯಂಪ್ರೇರಣೆಯಿಂದಾಗಲಿ: ಅವಳಿ ನಗರದಲ್ಲಿ ಭಾನುವಾರದ ಸಂಪೂರ್ಣ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ. ಸಾರ್ವಜನಿಕರು ಅನಗತ್ಯವಾಗಿ ಬೀದಿಗೆ ಬರಬಾರದು. ಈ ಲಾಕ್ಡೌನ್ಗೆ ಸ್ವಯಂಪ್ರೇರಣೆಯಿಂದ ಜನ ಸ್ಪಂದಿಸಬೇಕು ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ್ ಕೋರಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ರಾತ್ರಿ 8 ಗಂಟೆಯಿಂದಲೇ ಲಾಕ್ಡೌನ್ ಜಾರಿಗೆ ಬಂದಿರುತ್ತದೆ. ಭಾನುವಾರ ಇಡೀ ದಿನ ಬಂದ್ ಇರಲಿದೆ. ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಕೆಲ ಸಿಬ್ಬಂದಿಗೆ ಮಾತ್ರ ಪದೇ ಪದೆ ಕೋವಿಡ್ ಬಂದೋಬಸ್ತ್ಗೆ ನಿಯೋಜಿಸಲಾಗುತ್ತಿದೆಯೆಂಬುದು ನನ್ನ ಗಮನಕ್ಕೆ ಬಂದಿಲ್ಲ. ಆಯಾ ಠಾಣೆ ಇನ್ಸ್ಪೆಕ್ಟರ್ಗಳು ಇದನ್ನು ನಿರ್ಧರಿಸುತ್ತಾರೆ. ಆದಾಗ್ಯೂ ಈ ಕುರಿತು ಪರಿಶೀಲನೆ ನಡೆಸುವಂತೆ ಇನ್ಸ್ಪೆಕ್ಟರ್ಗಳು, ಎಸಿಪಿಗಳಿಗೆ ಸೂಚಿಸುತ್ತೇನೆ ಎಂದರು.
ಕಿಮ್ಸ್ನಿಂದ ಪರಾರಿಯಾಗಿದ್ದ ಕರೊನಾ ಸೋಂಕಿತ ಕಳ್ಳನನ್ನು ಬಂಧಿಸಿದ್ದೇವೆ. ಸರ್ಕಾರದ ಮಾರ್ಗಸೂಚಿಯಂತೆ ಅಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೆವು. ಇನ್ನು ಮುಂದೆ ಕಿಮ್ಸ್ನಲ್ಲಿ ಬಂದೋಬಸ್ತ್ ಹೆಚ್ಚಿಸುತ್ತೇವೆ ಎಂದು ಉತ್ತರಿಸಿದರು.