

ಗುಂಡ್ಲುಪೇಟೆ: ಯುವತಿಯೊಬ್ಬಳು ಅನ್ಯಧರ್ಮೀಯ ಯುವಕನೊಂದಿಗೆ ಓಡಿಹೋದ ಹಿನ್ನೆಲೆಯಲ್ಲಿ ಯುವತಿಯ ಅಣ್ಣ, ಆ ಯುವಕನ ಸಂಬಂಧಿಗೆ ಪಟ್ಟಣದ ಪೊಲೀಸ್ ಠಾಣೆ ಎದುರು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ಪಟ್ಟಣದ ಪೌರಕಾರ್ಮಿಕ ಕಾಲನಿಯ ಆರ್ಮುಗಂ ಚಾಕು ಇರಿತಕ್ಕೊಳಗಾಗಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಆರೋಪಿ ಜಾಕೀರ್ ಹುಸೇನ್ ಎಂಬಾತನನ್ನು ಬಂಧಿಸಿದ್ದಾರೆ.
ಘಟನೆಯ ವಿವರ: ಸೆ.30ರಂದು ಪಟ್ಟಣದ ಜಾಕೀರ್ ಹುಸೇನ್ ನಗರದ ಬೀಬಿ ಆಯೇಷಾ ಕಾಣೆಯಾಗಿದ್ದಳು. ಅದೇ ದಿನ ಪೌರ ಕಾರ್ಮಿಕ ಬಡಾವಣೆಯ ಚಿಕ್ಕನಂಜಯ್ಯ ಅವರ ಮಗ ಮಹೇಂದ್ರ ಸಹ ಕಾಣೆಯಾಗಿದ್ದನು. ಈ ಸಂಬಂಧ ಮಗಳು ಕಾಣೆಯಾಗಿರುವ ಬಗ್ಗೆ ಪಾಲಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬಳಿಕ ಅ.4ರ ಸಂಜೆ ಬೀಬಿ ಆಯೇಷಾಳ ಅಣ್ಣ ಜಾಕೀರ್, ಮಹೇಂದ್ರನ ಅಕ್ಕನಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದನು. ಈ ಹಿನ್ನೆಲೆಯಲ್ಲಿ ಮಹೇಂದ್ರ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ಕೊಡಲು ಬಂದು ಹೊರಗೆ ನಿಂತಿದ್ದರು. ಈ ವೇಳೆ ತನ್ನ ಸ್ನೇಹಿತನ ಬೈಕ್‌ನಲ್ಲಿ ಬಂದ ಜಾಕೀರ್ ಸಂಬಂಧಿಯೊಬ್ಬರಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದನು.
ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮನೆಬಿಟ್ಟು ತೆರಳಿದ್ದ ಬೇಬಿ ಆಯೇಷಾ ಮತ್ತು ಮಹೇಂದ್ರ ಅವರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಭೇಟಿ ನೀಡಿ ಘಟನೆ ವಿವರ ಪಡೆದುಕೊಂಡರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಂದೋಬಸ್ತ್ ಮಾಡಲಾಗಿದೆ.