

ಚಿತ್ರದುರ್ಗ: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ 454 ಹುದ್ದೆಗಳು-ಕಲ್ಯಾಣ ಕರ್ನಾಟಕ, ಭರ್ತಿಗೆ ಭಾನುವಾರ ನಗರದ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಿತು.
ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರ ವರೆಗೆ ನಡೆದ ಪರೀಕ್ಷೆಗೆ 3720 ಪೈಕಿ 2402 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಅತ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಭ್ಯರ್ಥಿಗಳು ಪರೀಕ್ಷಾ ಕೊಠ ಡಿಗೆ ಕೊಂಡೊಯ್ಯುಲು ಅವಕಾಶವಿರಲಿಲ್ಲ. ಅತ್ಯಂತ ಬಿಗಿ ತಪಾಸಣೆ ಬಳಿಕ ಪರೀಕ್ಷಾ ಕೊಠಡಿಗೆ ತೆರಳಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿತ್ತು.
ಪರೀಕ್ಷೆ ಮೇಲುಸ್ತುವಾರಿ ವಹಿಸಿದ್ದ ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ ಅವರು ಬೆಳಗ್ಗೆ ಮೊದಲ ಸುತ್ತಿನಲ್ಲಿ ಎಲ್ಲ ಕೇಂದ್ರಗಳು ಹಾಗೂ ನಂತರದ ಸುತ್ತಿನಲ್ಲಿ 2 ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿವಿಧ ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಯಾವುದೇ ಆಚಾತುರ‌್ಯಗಳಾಗದಂತೆ ನಿಗಾ ವಹಿಸಿದ್ದರು.
ಎಲ್ಲ ಕೇಂದ್ರಗಳ ಬಳಿ ಸೂಕ್ತ ಬಂದೋಬಸ್ತ್ ಇತ್ತು. ಎಲ್ಲೂ ಕೂಡ ಅಹಿತಕರ ಘಟನೆಗಳು ಆಗಿಲ್ಲ, ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಎಸ್‌ಪಿ ಪತ್ರಿಕೆಗೆ ತಿಳಿಸಿದರು.