ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿ ಆತ್ಮಹತ್ಯೆ

index
Published on

ಕಮಲನಗರ: ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನೊಬ್ಬ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

ಪಟ್ಟಣದ ನಿವಾಸಿ ಶ್ರೀಮಂತ ಗಾಯಕವಾಡ (25) ಸಾವಿಗೆ ಶರಣಾದವ. ಸ್ಥಳೀಯ ಪೊಲೀಸ್ ಠಾಣೆಗೆ ಈತನನ್ನು ಕಳೆದ ರಾತ್ರಿ ತರಲಾಗಿತ್ತು. ಮೂತ್ರ ವಿಸರ್ಜನೆಗೆ ಹೋಗುವುದಾಗಿ ಹೊರಬಂದವ, ಜತೆಗಿದ್ದ ಪೇದೆಗಳನ್ನು ತಳ್ಳಿ ಠಾಣೆ ಪಕ್ಕದ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.

ಘಟನೆ ವಿವರ: ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಮಂತ, ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡು ಸ್ವಗ್ರಾಮ ಕಮಲನಗರಕ್ಕೆ ಬಂದಿದ್ದ. ನನಗೆ ವಯಸ್ಸಾಗಿದ್ದು, ಏಕೆ ಮದುವೆ ಮಾಡುತ್ತಿಲ್ಲ ಎಂದು ಪದೇಪದೆ ಮನೆಯಲ್ಲಿ ಜಗಳವಾಡುತ್ತಿದ್ದ. ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದ ಈತ, ಬುಧವಾರ ರಾತ್ರಿ ಚಿಕ್ಕಪ್ಪ ಸಂಜೀವಕುಮಾರ ಜತೆ ಜಗಳವಾಡಿದ್ದ. ಈ ವೇಳೆ ಬ್ಲೇಡ್ ನಿಂದ ದಾಳಿ ನಡೆಸಿದ್ದರಿಂದ ಸಂಜೀವ ಅವರ ಕತ್ತು ಇತರೆಡೆ ತೀವ್ರ ಗಾಯವಾಗಿವೆ.

ಘಟನೆ ಸಂಬಂಧ ಸಂಜೀವಕುಮಾರ ದೂರಿನನ್ವಯ ಪೊಲೀಸರು ಕೊಲೆ ಯತ್ನ (307 ಸೆಕ್ಷೆನ್ ಅಡಿ)ಪ್ರಕರಣ ದಾಖಲಿಸಿ ಶ್ರೀಮಂತನನ್ನು ಠಾಣೆಗೆ ಕರೆತಂದಿದ್ದರು. ರಾತ್ರಿ 11.30ರ ಸುಮಾರಿಗೆ ಮೂತ್ರ ವಿಸರ್ಜನೆಗೆ ಹೋಗುವುದಿದೆ ಎಂದು ತಿಳಿಸಿದ್ದಾನೆ. ಬಾತ್ ರೂಮ್ ಕಡೆ ಕರೆದೊಯ್ಯುವಾಗ ಜತೆಗಿದ್ದ ಪೋಲಿಸರನ್ನು ತಳ್ಳಿ ಪಕ್ಕದ ಪ್ರವಾಸಿ ಮಂದಿರ ಹತ್ತಿರದ ಬಾವಿಗೆ ಹಾರಿದ್ದಾನೆ. ಗುರುವಾರ ಬೆಳಗ್ಗೆ ಶವ ಹೊರತೆಗೆಯಲಾಗಿದೆ.

ಸ್ಥಳಕ್ಕೆ ಎಸ್ಪಿ ಡಿ.ಎಲ್. ನಾಗೇಶ್, ಡಿವೈಎಸ್ಪಿ ಡಾ.ದೇವರಾಜ್, ಸಿಪಿಐ ಪಾಲಾಕ್ಷಯ್ಯ ಹಿರೇಮಠ ಭೇಟಿ ನೀಡಿದರು. ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ನಡೆದಿರುವ ಕಾರಣ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net