

ಚಿತ್ರದುರ್ಗ: ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಪೊಲೀಸ್ ಇಲಾಖೆ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಪ್ರಕರಣಗಳಲ್ಲಿ ಪತ್ತೆ ಮಾಡಿದ ನಾನಾ ಸ್ವತ್ತ ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಮತ್ತು ಪೊಲೀಸ್ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆ ಹೆಚ್ಚಳವಾದಂತೆ ಅಪರಾಧ ಪ್ರಕರಣಗಳೂ ಏರಿಕೆಯಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಬಲಪಡಿಸಲು ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಅಪರಾಧಗಳ ನಿಯಂತ್ರಣಕ್ಕೆ ಸಾರ್ವಜನಿಕರೂ ಪೊಲೀಸರ ಜತೆ ಕೈ ಜೋಡಿಸಬೇಕು. ಇನ್ನೂ ಹೆಚ್ಚಿನ ಶ್ರಮ ವಹಿಸಿ ಅಪರಾಧಗಳ ತಡೆಗೆ ಪ್ರಯತ್ನಿಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ 139 ಕಳವು ಪ್ರಕರಣಗಳಲ್ಲಿ 2.13 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ, ವಾಹನ, ನಗದು, ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಸಚಿವರು ಸಾಂಕೇತಿಕವಾಗಿ ವಾರಸುದಾರರಿಗೆ ಹಿಂತಿರುಗಿಸಿದರು.
ಇದೇ ವೇಳೆ ಅಪರಾಧ ತಡೆ ಮಾಸಾಚರಣೆ ಜಾಗೃತಿ ಪುಸ್ತಕ ಬಿಡುಗಡೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 5.27 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ವಸ್ತುಗಳನ್ನು ಪತ್ತೆ ಮಾಡಲಾಗಿದೆ. ಸದ್ಯ 2.13 ಕೋಟಿ ರೂ.ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದರು.
ಅಪರಾಧ ಪ್ರಕರಣಗಳನ್ನು ಅವಲೋಕಿಸಿದಾಗ ಹಲವನ್ನು ತಡೆಗಟ್ಟಲು ಸಾಧ್ಯವಿತ್ತು. ಮಹಿಳಾ, ಸಂಚಾರಿ ಹಾಗೂ ಸೈಬರ್ ಪೊಲೀಸ್ ಠಾಣೆಯಿಂದ ಮಹಿಳೆಯರ ರಕ್ಷಣೆ, ಆಸ್ತಿ ವಿವಾದ, ಅಪಘಾತ, ಪೋಕ್ಸೋ, ಕಳವು ಮುಂತಾದ ಪ್ರಕರಣಗಳ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಸಶಸ್ತ್ರ ಮೀಸಲು ಪಡೆಯಿಂದ ಆಯುಧಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಡಿಎಆರ್ ಡಿವೈಎಸ್ಪಿ ಗಣೇಶ್ ಅಪರಾಧ ತಡೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಳವಾಗಿದ್ದ ಟ್ರಾೃಕ್ಟರ್‌ಟ್ರಾೃಲಿ ಕೈ ಸೇರಿದ್ದಕ್ಕೆ ನೂಲೇಶ್, ಮೊಬೈಲ್ ಮರಳಿದ್ದಕ್ಕೆ ನಿರಂಜನ್ ಮತ್ತಿತರರು ಹರ್ಷ ವ್ಯಕ್ತಪಡಿಸಿ, ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು. ಎಎಸ್‌ಪಿ ಎಸ್‌ಜೆ ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ಪಿ.ಕೆ. ದಿನಕರ್, ರಾಜಣ್ಣ, ಶಿವಕುಮಾರ್, ಡಿವೈಎಸ್‌ಪಿ ಉಮೇಶ್‌ನಾಯಕ್ ಮತ್ತಿತರ ಪೊಲೀಸ್ ಅಧಿಕಾರಿಗಳು ಇದ್ದರು.
2 ಕೆ.ಜಿ. ಚಿನ್ನ, 22 ಕೆ.ಜಿ. ಬೆಳ್ಳಿ ವಶ
ಜಿಲ್ಲಾದ್ಯಂತ 2.158 ಕೆಜಿ ಚಿನ್ನ, 22.654 ಕೆ.ಜಿ. ಬೆಳ್ಳಿ, 81 ದ್ವಿಚಕ್ರ ವಾಹನ, 3 ನಾಲ್ಕು ಚಕ್ರ ವಾಹನ, 3 ಲಘು ವಾಹನ, 4 ಭಾರಿ ವಾಹನ ಹಾಗೂ 430 ಮೊಬೈಲ್ ಫೋನ್‌ಗಳು ಸೇರಿ 210 ಪ್ರಕರಣಗಳಲ್ಲಿ 5.27 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ 2.13 ಕೋಟಿ ರೂ. ಮೌಲ್ಯದ ವಸ್ತುಗಳನ್ನು 653 ವಾರಸುದಾರಿಗೆ ಹಿಂತಿರುಗಿಸಲಾಗಿದೆ ಎಂದು ಎಸ್‌ಪಿ ಹೇಳಿದರು.
ವಸ್ತು ಪ್ರದರ್ಶನ
ವಸ್ತು ಪ್ರದರ್ಶನದಲ್ಲಿ ಬೆಲೆ ಬಾಳುವ ಪರಿಕರಗಳು, ಕುರಿಗಳು, ವಾಹನಗಳು, ಶ್ರೀಗಂಧ ಸಹಿತ ವಿವಿಧ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳು ಗಮನ ಸೆಳೆದವು. ರೆಡ್‌ಕ್ರಾಸ್ ಸಂಸ್ಥೆಯಿಂದ ಪ್ರಾಥಮಿಕ ಚಿಕಿತ್ಸೆ ಕುರಿತು ಜಾಗೃತಿ, ಅಗ್ನಿಶಾಮಕ ದಳದಿಂದ ಅಗ್ನಿ ಅವಘಡಗಳ ಕುರಿತು ಅಣಕು ಪ್ರದರ್ಶನ ನಡೆಯಿತು.