ಪೊಲೀಸ್ ಅಧಿಕಾರಿ ವರ್ಗಾವಣೆಗೆ ಎಚ್.ಡಿ.ರೇವಣ್ಣ ಆಗ್ರಹ

ಪೊಲೀಸ್ ಅಧಿಕಾರಿ ವರ್ಗಾವಣೆಗೆ ಎಚ್.ಡಿ.ರೇವಣ್ಣ ಆಗ್ರಹ
Published on

ಹಾಸನ : ಹಾಸನ ನಗರ ವಿಧಾನಸಭಾ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳು ರೌಡಿಗಳ ಅಧೀನದಲ್ಲಿದ್ದು, ಇದಕ್ಕೆ ಡಿವೈಎಸ್‌ಪಿ ಕುಮ್ಮಕ್ಕು ನೀಡುತ್ತಿದ್ದಾರೆ. ಆ ಅಧಿಕಾರಿಯನ್ನು ವರ್ಗಾವಣೆ ಮಾಡಿ, ಅವರ ಮೇಲೆ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮಾ.27ರಂದು ಎಸ್‌ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಶಾಸಕ ಎಚ್.ಡಿ. ರೇವಣ್ಣ ಅವರು ಎಚ್ಚರಿಕೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಾಗಿದ್ದು, ಡಿವೈಎಸ್ಪಿ, ಪೆನ್‌ಷನ್ ಮೊಹಲ್ಲಾ ಹಾಗೂ ಗ್ರಾಮಾಂತರ ಠಾಣೆಗಳನ್ನು ರೌಡಿಗಳೇ ನಿಯಂತ್ರಣ ಮಾಡುತ್ತಿದ್ದಾರೆ. ಇದರ ಬಗ್ಗೆ ಡಿಸಿ, ಗೃಹ ಸಚಿವರು ಮತ್ತು ಪೊಲೀಸ್ ಮಹಾನಿರ್ದೆಶಕರಿಗೆ ಪತ್ರ ಬರೆಯಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಮಾ.27ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹಾಸನ ಸಂಸದರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಲ ತಿಂಗಳ ಹಿಂದೆ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆಗೆ ಡಿವೈಎಸ್ಪಿ ಪ್ರಮುಖ ಕಾರಣಕರ್ತ. ಅಲ್ಲದೆ ಆರೋಪಿಗಳನ್ನು ಬಿಡಿಸುವಲ್ಲಿಯೂ ಸಂಪೂರ್ಣವಾಗಿ ಸಹಕರಿಸುತ್ತಿದ್ದು, ಅವರ ಅನುಕೂಲಕ್ಕೆ ತಕ್ಕಂತೆ ಎಫ್‌ಐಆರ್ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಕೆಲವು ದಿನಗಳ ಹಿಂದೆ ದೊಡ್ಡಪುರದ ರಾಮೇಶ್ವರ ದೇಗುಲ ಉದ್ಘಾಟನೆಗೆ ನಾನು ಹೋಗುವ ಮುನ್ನವೇ ಹಾಸನ ನಗರಸಭೆಯಿಂದ ಟ್ರಾೃಕ್ಟರ್ ಕಳುಹಿಸಿ ಅಲ್ಲಿ ಹಾಕಲಾಗಿದ್ದ ಜೆಡಿಎಸ್ ಬ್ಯಾನರ್, ಫ್ಲೆಕ್ಸ್ ಕಿತ್ತು ಹಾಕಿದ್ದರು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೊಡ್ಡಪುರಕ್ಕೂ ಹಾಸನ ನಗರಸಭೆಗೂ ಏನು ಸಂಬಂಧ. ಅವರು ಏಕೆ ಬಂದು ಬ್ಯಾನರ್ ತೆರವುಗೊಳಿಸಬೇಕಿತ್ತು? ಬೇರೆ ಪಕ್ಷದ ಬ್ಯಾನರ್, ಫ್ಲೆಕ್ಸ್ ಬಿಟ್ಟು ಜೆಡಿಎಸ್ ಫ್ಲೆಕ್ಸ್ ತೆರವುಗೊಳಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಹುಡುಗರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಹಾಸನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಡಳಿತ ನಡೆಯುತ್ತಿಲ್ಲ. ಡಿವೈಎಸ್‌ಪಿ, ರೌಡಿಗಳು ಆಡಳಿತ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಸೆಟಲ್‌ಮೆಂಟ್‌ಗಳು ನಡೆಯುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 200 ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಕೆಟ್ಟ ವ್ಯವಸ್ಥೆಯನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕೆಂಬ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗಕ್ಕೂ ಪತ್ರ ಬರೆದು ಪೊಲೀಸ್ ಇಲಾಖೆಯಲ್ಲಿ ಇರುವ ಕೆಲವರನ್ನು ಎತ್ತಂಗಡಿ ಮಾಡಿಸಬೇಕು ಎಂದು ಆಗ್ರಹಿಸಿದರು.

ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಈಚೆಗಷ್ಟೇ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಕಿತ್ತುಬಂದಿದ್ದು, ಅದಕ್ಕೆ ಟಾರ್ ಹಾಕಿ ತೇಪೆ ಹಾಕುವ ಕೆಲಸ ಮಾಡಿದ್ದಾರೆ. ನಗರಸಭೆಯ ಅಧಿಕಾರಿಗಳ ಮನೆ ಮೇಲೆ ಐಟಿ ದಾಳಿ ಮಾಡಿದರೆ ಒಬ್ಬೊಬ್ಬರ ಮನೆಯಲ್ಲಿ ಕನಿಷ್ಠ 100 ಕೋಟಿ ರೂ. ಹಣ ಸಿಗುತ್ತದೆ. ಲೋಕಾಯುಕ್ತಕ್ಕೆ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ ಎಂದು ಹೇಳುತ್ತದೆ. ಆದರೆ, ಹಾಸನ ಲೋಕಾಯುಕ್ತ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.

ನಾಲ್ಕೈದು ದಿನದಲ್ಲಿ ಹಾಸನ ಟಿಕೆಟ್ ಘೋಷಣೆ

ಹಾಸನ ವಿಧಾನಸಭೆ ಕ್ಷೇತ್ರದ ಟಿಕೆಟ್ ವಿಷಯವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಅವರು, ದೇವೇಗೌಡರು ಟಿಕೆಟ್ ನಿರ್ಣಯ ಮಾಡುತ್ತಾರೆ. ನಾಲ್ಕೈದು ದಿನದಲ್ಲಿ ಟಿಕೆಟ್ ಘೋಷಣೆ ಆಗಲಿದೆ. ದೇವೇಗೌಡರ ಮಾರ್ಗದರ್ಶನದಲ್ಲಿ ಹಾಸನದಲ್ಲಿ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸುವಂತಹ ಮ್ಯಾಜಿಕ್ ಮಾಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net