ಪೊಲೀಸರು, ಆರೋಗ್ಯ ಸಿಬ್ಬಂದಿಗೆ ಸಹಕರಿಸಿ

HSD covid-19 sabe 02 file-1
Published on

ಹೊಸದುರ್ಗ, ಸಾರ್ವಜನಿಕರು, ಶಾಸಕ, ಮನವಿ, Hosadurga, public, legislator, appeal
ಹೊಸದುರ್ಗ: ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಉತ್ತಮ ಕಾರ್ಯದಿಂದಾಗಿ ತಾಲೂಕಿನಲ್ಲಿ ಈವರೆಗೆ ಕರೊನಾ ಪ್ರಕರಣ ವರದಿಯಾಗಿಲ್ಲ. ಈ ಎರಡು ಇಲಾಖೆ ಕಾರ್ಯಕ್ಕೆ ಜನ ಸಹಕರಿಸಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕೋವಿಡ್-19 ತಡೆ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಕರೊನಾ ವೈರಸ್ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಉಳಿದ ಇಲಾಖೆಗಳು ಪೊಲೀಸ್, ಆರೋಗ್ಯ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ಮಾಡಬೇಕು. ಯೋಧರಂತೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸರ್ಕಾರದಿಂದ ಊಟ ನೀಡಬೇಕು. ಇದಕ್ಕೆ ಬಿಸಿಎಂ ಹಾಸ್ಟೆಲ್ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಂದಿನ ಸ್ಥಿತಿ ಸಮರ್ಥವಾಗಿ ಎದುರಿಸಲು ಹೊಸದುರ್ಗ ಹಾಗೂ ಶ್ರೀರಾಂಪುರದಲ್ಲಿ ಏ.3ರಂದು ಫ್ಲೂ ಚಿಕಿತ್ಸಾ ಕೇಂದ್ರ ಹಾಗೂ ಐಸೋಲೇಷನ್ ಸೆಂಟರ್ ತೆರೆಯಾಲಾಗುತ್ತಿದೆ. ಪಟ್ಟಣ ವ್ಯಾಪ್ತಿಯ ನಿರ್ಗತಿಕರಿಗೆ ಅಗತ್ಯ ಆಹಾರ ಸಾಮಗ್ರಿ ಸರಬರಾಜು ಮಾಡಲಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಿಪಿಐ ಫೈಜುಲ್ಲಾ ಮಾತನಾಡಿ, ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ತಾಲೂಕಿನಲ್ಲಿ ಯಾವುದೇ ವ್ಯಕ್ತಿಗಳಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹತೋಟಿಯಲ್ಲಿದೆ. ಜನರು ಅನಗತ್ಯವಾಗಿ ರಸ್ತೆಗೆ ಬರಬಾರದು ಎಂದು ಮನವಿ ಮಾಡಿದರು.

ತಾಪಂ ಇಒ ಜಾನಕೀರಾಮ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಟಿಎಚ್‌ಒ ಡಾ.ಚಂದ್ರಶೇಖರ ಕಂಬಾಳಿಮಠ, ಬಿಸಿಎಂ ವಿಸ್ತರಣಾಧಿಕಾರಿ ಶಶಿಧರ್, ಬೆಸ್ಕಾಂ ಎಇಇ ತಿರುಪತಿ ನಾಯ್ಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net