ಪೊಲೀಸರು ಆರೋಗ್ಯ ಕುರಿತು ಜಾಗೃತಿವಹಿಸಿ

02rajesh3
Published on

ಚಾಮರಾಜನಗರ: ಕಾನೂನು ಸುವ್ಯವಸ್ಥೆ ಕಪಾಡುವ ನಿಟ್ಟನಲ್ಲಿ ಪೊಲೀಸರು ತಮ್ಮ ಆರೋಗ್ಯದ ಮೇಲೆ ಜಾಗೃತಿ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸಲಹೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಏ.2 ರಂದು ಜಾರಿಗೆ ಬಂದಿತು. ಅದರ ಸವಿನೆನಪಿಗಾಗಿ ಪ್ರತಿವರ್ಷವೂ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರ ಜೀವನ ಸುಖಮಯವಾಗಿರಲಿ. ಪೊಲೀಸ್ ಧ್ವಜವನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಎಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರ ಆರೋಗ್ಯ ಸಲುವಾಗಿ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸದವರ ಸೇವೆ ಸ್ಮರಣೀಯವಾಗಿದೆ. ಅದರಂತೆ 2024-25 ನೇ ಸಾಲಿನಲ್ಲಿ 12 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿವೃತ್ತರಾಗಿದ್ದಾರೆ. ಈ ಸಾಲಿನಲ್ಲಿ ವೈದ್ಯಕೀಯ ಧನ ಸಹಾಯವಾಗಿ 7.53 ಪಕ್ಷ ರೂ,ಗಳನ್ನು ಮಂಜೂರು ಮಾಡಲಾಗಿದೆ. ಪೊಲೀಸರು ಸದಾಕಾಲವೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಪಿಎಸ್‌ಐ ವಿಜಯ್‌ಕುಮಾರ್ ಮಾತನಾಡಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಘಟಕದಲ್ಲಿ ಸುಮಾರು 32 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೇನೆ. ಇಲಾಖೆಯಲ್ಲಿ ಕೆಲಸದ ಒತ್ತಡ ತುಂಬಾ ಇರುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ಆರೋಗ್ಯವನ್ನು ಕಪಾಡಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್ಪಿಗಳಾದ ಲಕ್ಷ್ಮಯ್ಯ, ಧರ್ಮೇಂದ್ರ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net