

ಅರಕೇರಾ: ಶೋಷಿತ ವರ್ಗಕ್ಕೆ ನ್ಯಾಯ ಒದಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಜನಸ್ನೇಹಿ ಆಡಳಿತ ನಡೆಸುವುದು ಮುಖ್ಯ ಉದ್ದೇಶವಾಗಿದೆ ಎಂದು ಪಿಐ ಮಂಜುನಾಥ ಹೇಳಿದರು.
ಗ್ರಾಪಂ ಆವರಣದಲ್ಲಿ ದೇವದುರ್ಗ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆಯಲ್ಲಿ ಸೋಮವಾರ ಮಾತನಾಡಿದರು. ಅಕ್ರಮ ಮದ್ಯ ಮಾರಾಟ, ಇಸ್ಟೀಟ್, ಕೋಳಿ ಪಂದ್ಯ, ಮಟಕಾ, ಕ್ರಿಕೆಟ್ ಬೆಟ್ಟಿಂಗ್‌ನಂತಹ ಚಟುವಟಿಕೆಗಳಿಂದ ಜನರು ದೂರವಿರಬೇಕು. ಜೂಜಾಟ ಆಡಿಸುವ ಕುಟುಂಬಗಳು ಅಭಿವೃದ್ಧಿಯಾಗುತ್ತವೆಯೇ ಹೊರತು ಅದರಲ್ಲಿ ತೊಡಗಿದವರ ಕುಟುಂಬಗಳು ನಾಶವಾಗುತ್ತವೆ. ಅಪರಾಧ ಪ್ರಕರಣಗಳು ಬೆಳಕಿಗೆ ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ವ್ಯಾಪಕವಾಗಿದ್ದು, ಇದಕ್ಕೆ ಅಮಾಯಕರು, ಶೋಷಿತರು, ಬಡ ವರ್ಗದವರು ಸುಲಭವಾಗಿ ತುತ್ತಾಗುತ್ತಿದ್ದಾರೆ. ಜನರು ಈ ಕುರಿತು ಜಾಗೃತರಾಗಿರಬೇಕು. ಎಸ್ಸಿ, ಎಸ್ಟಿ ಜನಾಂಗ ಮೇಲ್ವರ್ಗದವರಿಂದ ಕಿರುಕುಳ, ದೌರ್ಜನ್ಯಕ್ಕೆ ಒಳಗಾದಲ್ಲಿ ದೂರು ಸಲ್ಲಿಸಬೇಕು. ದೌರ್ಜನ್ಯ ಪ್ರಕರಣವನ್ನು ದುರುಪಯೋಗ ಮಾಡಿಕೊಳ್ಳಬಾರದು. ಅರಕೇರಾದಲ್ಲಿ ಪೊಲೀಸ್ ಠಾಣೆ ಮಂಜೂರಿಗೆ ಬಹುದಿನಗಳ ಬೇಡಿಕೆ ಇದೆ. ಜಾಲಹಳ್ಳಿ, ದೇವದುರ್ಗ, ಗಬ್ಬೂರು ಠಾಣೆ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಿ ಪ್ರಸ್ತಾವನೆ ಕಳಿಸಲಾಗಿದೆ. ಈ ಕುರಿತ ನಕಾಶೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಿಐ ಮಂಜುನಾಥ ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯಕ ಪೊಲೀಸ್ ಪಾಟೀಲ್ ಮಾತನಾಡಿ, ವಿಧಾನಸಭೆ ಚುನಾವಣೆಗೂ ಮುನ್ನ ಗ್ರಾಮದಲ್ಲಿ ಇಬ್ಬರು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಯಾರೂ ಕರ್ತವ್ಯ ನಿರ್ವಹಿಸುತ್ತಿಲ್ಲ. ಗ್ರಾಮದಲ್ಲಿ ಅಹಿತಕರ ಘಟನೆಗಳ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜನೆ ಮಾಡಬೇಕು ಎಂದರು. ಪ್ರಮುಖರಾದ ಶೇಖರಪ್ಪಗೌಡ ಮಾಲಿ ಪಾಟೀಲ್, ಮಾನಶಯ್ಯ ಪೂಜಾರಿ, ಪೊಲೀಸ್ ಸಿಬ್ಬಂದಿ ಹನುಮಂತ, ಹನುಮೇಶ, ಗೋಪಾಲ ಸಿಂಗ್ ಇದ್ದರು.