ಪೊಲೀಸರ ವಿರುದ್ಧ ಹಿಂದು ಜಾಗರಣ ವೇದಿಕೆ ಪ್ರತಿಭಟನೆ

IMG-20230120-WA0081
ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸರ ಕರ್ತವ್ಯ ಲೋಪ ವಿರುದ್ಧ ಠಾಣೆ ಎದುರು ಹಿಂದು ಜಾಗರಣಾ ವೇದಿಕೆಯ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
Published on

ಗುಂಡ್ಲುಪೇಟೆ: ತಾಲೂಕಿನ ಸೀಗೆವಾಡಿ ಗ್ರಾಮದಲ್ಲಿ ಪುರಾತನ ದೇವಾಲಯ ಧ್ವಂಸ ಪ್ರಕರಣದ ಆರೋಪಿಗಳನ್ನು ಬಂಧಿಸದೆ ದೂರುದಾರರ ವಿರುದ್ಧ ಪ್ರಕರಣ ದಾಖಲಿಸಿದ ಬೇಗೂರು ಪೊಲೀಸರ ವಿರುದ್ಧ ಶುಕ್ರವಾರ ಹಿಂದು ಜಾಗರಣಾ ವೇದಿಕೆ ಸದಸ್ಯರು ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದ ಸುಜಾತ ಎಂಬ ಪ್ರಭಾವಿ ಮಹಿಳೆ ತನ್ನ ಜಮೀನಿನ ಪಕ್ಕದ ಸರ್ಕಾರಿ ಜಮೀನು ಕಬಳಿಸುವ ಸಲುವಾಗಿ ಅಲ್ಲಿದ್ದ ಪುರಾತನ ಚೆಲುವನಾರಾಯಣಸ್ವಾಮಿ ದೇವಾಲಯ ಸುತ್ತ ಇದ್ದ ನಾಗರಕಲ್ಲುಗಳನ್ನು ಜೆಸಿಬಿಯಿಂದ ಕಿತ್ತು ದೇವಾಲಯ ಧ್ವಂಸಗೊಳಿಸಲು ಮುಂದಾಗಿದ್ದರು. ಈ ಬಗ್ಗೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸ್ಥಳಕ್ಕೆ ಆಗಮಿಸಿದ ಕಂದಾಯಾಧಿಕಾರಿಗಳು ಕಾಮಗಾರಿಗೆ ತಡೆಯೊಡ್ಡಿದ್ದರು. ಆದರೂ ರಾತ್ರಿ ವೇಳೆ ಕಾಮಗಾರಿ ಮುಂದುವರಿಸಿದ್ದರಿಂದ ಗ್ರಾಮಸ್ಥರು ಜಾಗರಣಾ ವೇದಿಕೆ ಗಮನಕ್ಕೆ ತಂದು ದೇವಾಲಯ ಉಳಿವಿಗೆ ಮನವಿ ಮಾಡಿದ್ದರು.

ಈ ಬಗ್ಗೆ ಗ್ರಾಮದಲ್ಲಿ ಪರಿಶೀಲನೆ ನಡೆಸಿದ ಹಿಂದು ಜಾಗರಣಾ ವೇದಿಕೆ ಸದಸ್ಯರು, ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿ ಪುರಾತನ ಸ್ಮಾರಕಗಳ ಧ್ವಂಸ ಮಾಡಿದ ಬಗ್ಗೆ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ್ದರೂ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ದೂರು ನೀಡಿದ ಗ್ರಾಮಸ್ಥರ ವಿರುದ್ಧ ಶಾಂತಿ ಭಂಗಕ್ಕೆ ಯತ್ನ ಮಾಡಿದ ಪ್ರಕರಣ ದಾಖಲಿಸಿ ಕರ್ತವ್ಯಲೋಪ ಎಸಗಿದ್ದರು.

ಆದ್ದರಿಂದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು, ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರ ಜತೆಗೂಡಿ ಠಾಣೆ ಎದುರು ಪ್ರತಿಭಟನೆ ನಡೆಸಿದರು. ವೇದಿಕೆಯ ಪ್ರಾಂತ ಸಹ ಸಂಚಾಲಕ ಲೋಹಿತ್ ಅರಸ್, ಜಿಲ್ಲಾ ಸಂಚಾಲಕ ನಂದೀಶ್ ಕೆಬ್ಬೆಪುರ, ಸಹ ಸಂಚಾಲಕರಾದ ನಂದೀಶ್ , ಸುಂದರ್‌ರಾಜ್ , ಶಾಂತಮೂರ್ತಿ, ಚನ್ನಪ್ಪ ಮತ್ತು ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net